ಸಾಥ್ ನೀಡಿದ ಮಾಜಿ ಸಂಸದ ಸಂಗಣ್ಣ ಕರಡಿ
ಪರ್ಯಾಯ ಕ್ರಮಕ್ಕೆ ಶಾಸಕ ಹಿಟ್ನಾಳ ಸೂಚನೆಕನ್ನಡಪ್ರಭ ವಾರ್ತೆ ಕೊಪ್ಪಳ
ಸಂಸದ ಕೆ.ರಾಜಶೇಖರ ಹಿಟ್ನಾಳ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಜಂಟಿಯಾಗಿ ಗುರುವಾರ ನಗರದಲ್ಲಿನ ವಿವಿಧೆಡೆ ಸಂಚರಿಸಿ ಮಳೆ ಹಾನಿ ಪ್ರದೇಶ ಪರಿಶೀಲಿಸಿದರು.ನಗರದ 3ನೇ ವಾರ್ಡ್‌ನ ಕುವೆಂಪು ನಗರ, ಹಮಾಲರ ಕಾಲನಿ, ನಗರದ ಕಿನ್ನಾಳ ರಸ್ತೆಯಲ್ಲಿರುವ ಗಣೇಶ ತೆಗ್ಗು ಹಾಗೂ ಕಲ್ಯಾಣ ನಗರಕ್ಕೆ ಮತ್ತು ರೈಲ್ವೆ ಸ್ಟೇಷನ್ ರಸ್ತೆಯ ವಿವಿಧೆಡೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕಳೆದ ಕೆಲವು ದಿನಗಳಿಂದ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮವಾಗಿ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್ 1 ರಿಂದ ಜೂನ್ 13ರವರೆಗೆ ವಾಡಿಕೆ ಮಳೆ 38 ಮಿಮೀ ಇದ್ದು, ವಾಸ್ತವವಾಗಿ 99 ಮಿಮೀ ಮಳೆಯಾಗಿದೆ. ಕಳೆದ ಏಳು ದಿನಗಳಲ್ಲಿ ವಾಡಿಕೆ ಮಳೆ 17 ಮಿಮೀ ಇದ್ದು, 62 ಮಿಮೀ ಮಳೆಯಾಗಿದೆ. ಈ ಮಳೆಯಿಂದ ಬಿತ್ತನೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಮೂಲ ನಕ್ಷೆಯ ಪ್ರಕಾರ ನಗರದಲ್ಲಿ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತದೆ. ರಾಜಕಾಲುವೆಗಳನ್ನು ಯಾರೇ ಒತ್ತುವರಿ ಮಾಡಿದರು ಅವುಗಳನ್ನು ಕೂಡಲೇ ತೆರವುಗೊಳಿಸಲಾಗುವುದು. ಸ್ವಾಮಿ ವಿವೇಕಾನಂದ ಅಂಡರ್ ಪಾಸ್ ಗೆ ಅನುದಾನ ಬಂದಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಹೇಳಿದರು.
ಶಾಸಕ ಮತ್ತು ಸಂಸದರು ಮಳೆಯಿಂದಾದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ಜನರು ತಮ್ಮ ಅಳಲು ತೋಡಿಕೊಂಡರು. ಮಳೆಯಿಂದಾಗಿ ಆಗುವ ಹಾನಿಯನ್ನು ಪ್ರತಿ ವರ್ಷವೂ ನೋಡಿಕೊಂಡು ಹೋಗುತ್ತಾರೆ. ಆದರೆ, ಪರಿಹಾರವನ್ನು ಕಂಡುಕೊಳ್ಳುವುದೇ ಇಲ್ಲ. ಈ ವರ್ಷ ಅತೀಯಾಗಿ ಮಳೆಯಾಗಿದ್ದರಿಂದ ನಾವು ಭಯದಲ್ಲಿ ಕಾಲಕಳೆಯುವಂತೆ ಆಗಿದೆ ಎಂದರು.ರಾಜಕಾಲುವೆ ಅತಿಕ್ರಮಣ ತೆರವು ಶುರು:
ನಗರದ ಗಣೇಶನಗರದ ಬಳಿಕ ರಾಜಕಾಲುವೆ ಅತಿಕ್ರಮಣವನ್ನು ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ವೆಂಕಟೇಶ್ವರ ದೇವಸ್ಥಾನದ ಬಳಿ ದೇವರಾಜ ಎಂಬವರ ನಿರ್ಮಾಣ ಹಂತದಲ್ಲಿರುವ ಮನೆ ಒಡೆದು ಹಾಕುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಸೂಚಿಸಿದರು. ಇದಕ್ಕೆ ಮನೆಯ ಮಾಲೀಕ ದೇವರಾಜ ಆಕ್ಷೇಪ ವ್ಯಕ್ತಪಡಿಸಿದರು. ನಾವು ನಿಯಮಾನುಸಾರ ನಿರ್ಮಾಣ ಮಾಡಿಕೊಂಡಿದ್ದು, ತೆರವು ಮಾಡದಂತೆ ಮನವಿ ಮಾಡಿದರು. ಆದರೂ ಸಹ ಅಧಿಕಾರಿಗಳು ನಂತರ ತೆರವು ಮಾಡುವುದಕ್ಕೆ ಮುಂದಾದಾಗ ಒಂದಷ್ಟು ವಾಗ್ವಾದವಾಯಿತು.