ಕನ್ನಡಪ್ರಭ ವಾರ್ತೆ ಸಾಗರ
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ನೌಕರರ ಸಮಾವೇಶ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಸುಂದರ ಭಾಷೆಯಾಗಿದ್ದು ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾದರೆ ರಾಜ್ಯದಲ್ಲಿ ಕನ್ನಡ ಭಾಷೆ ವಿಜೃಂಭಿಸುತ್ತದೆ. ಕನ್ನಡಿಗರು ಕನ್ನಡವನ್ನು ಗರ್ವದಿಂದ ಬಳಸುವ ಜೊತೆಗೆ ಉಳಿಸಬೇಕು ಎಂದರು.
ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ನಡೆದರೆ ಸರ್ಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸಲು ಸಾಧ್ಯ ಎಂದ ಶಾಸಕರು, ತಾಲೂಕಿನ ಅಧಿಕಾರಿ ನೌಕರರು ಜನರಿಗೆ ಉತ್ತಮ ಸೇವೆ ಕೊಡುವತ್ತ ಆದ್ಯತೆ ನೀಡಬೇಕು. ಜನರ ಕೆಲಸ ಮಾಡಬೇಕು ಎನ್ನುವ ಹಂಬಲದೊಂದಿಗೆ ನಾವು ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುತ್ತೇವೆ. ಜನರಿಗೆ ಉತ್ತಮ ಕೆಲಸ ಮಾಡಿಕೊಡಬೇಕಾದರೆ ನಿಮ್ಮ ಸಹಕಾರ ಅಗತ್ಯ. ರಾಜ್ಯ ಸರ್ಕಾರ ಏಳನೇ ವೇತನ ಆಯೋಗ ಜಾರಿಗೆ ತರುವ ಮೂಲಕ ನೌಕರರ ಹಿತ ಕಾಯುವ ಕೆಲಸ ಮಾಡಿದೆ. ಹಳೆ ಪಿಂಚಣಿ ಯೋಜನೆ ಬಗ್ಗೆ ಸಹ ಸರ್ಕಾರ ಸಹಮತ ಹೊಂದಿದೆ. ನೌಕರರು ಉತ್ತಮ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಘನತೆ ಎತ್ತಿ ಹಿಡಿಯಬೇಕು ಎಂದು ಹೇಳಿದರು.ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರು ಒತ್ತಡದ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಭಾಷೆ ಬಳಸಲು ಹಿಂದೆಮುಂದೆ ಆಗಬಹುದು. ಆದರೆ ಸರ್ಕಾರಿ ನೌಕರರ ಕನ್ನಡಾಭಿಮಾನ ಸದಾ ಸ್ಮರಣೀಯವಾದದ್ದು. ಎನ್.ಪಿ.ಎಸ್. ಜಾರಿ, ಕೇಂದ್ರ ಮಾದರಿ ವೇತನ ಇನ್ನಿತರ ಬೇಡಿಕೆಗಳ ಬಗ್ಗೆ ಸಂಘವು ಹೋರಾಟ ರೂಪಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಒತ್ತಡ ತಂದು ಋತುಚಕ್ರ ರಜೆಯನ್ನು ಕೊಡಿಸಿದೆ ಎಂದು ಹೇಳಿದರು.
ಸಂಘದ ತಾ. ಅಧ್ಯಕ್ಷ ಎನ್.ಸಂತೋಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಸೇವೆಯಲ್ಲಿ ನೌಕರರ ಪಾತ್ರ ವಿಷಯ ಕುರಿತು ಡಾ.ಬಿ.ಸಿ.ದಾದಾಪೀರ್ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಆರ್., ಎಸ್.ಬಸವರಾಜ್, ಮಧುಕೇಶವ ಇನ್ನಿತರರು ಹಾಜರಿದ್ದರು. ಅಣ್ಣಪ್ಪ ಡಿ.ಕೆ. ಸ್ವಾಗತಿಸಿದರು. ಸುರೇಶ್ ಜಂಬಾನಿ ನಿರೂಪಿಸಿದರು.