ಶಿರಸಿ: ಅಕ್ರಮ ಮರಳು ಗಣಿಗಾರಿಕೆಗೆ ಶಾಸಕ ಭೀಮಣ್ಣ ನಾಯ್ಕ ಬೆಂಬಲ ನೀಡಿಲ್ಲ. ಮರಳು ಯೋಗ್ಯ ದರದಲ್ಲಿ ಲಭಿಸಬೇಕು ಎಂಬುದು ಶಾಸಕರ ಉದ್ದೇಶವಾಗಿದೆ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರವಾರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಮರಳು ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಇಲ್ಲವಾದರೆ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ತುಂಬಾ ತೊಂದರೆಯಾಗುತ್ತದೆ ಎಂದು ಹೇಳಿದ್ದರು ಎಂದರು.ಜಿಲ್ಲೆಯ ಜನರು ಸಾಂಪ್ರದಾಯಿಕ ಮರಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಹೊಳೆ ಹಳ್ಳಗಳ ರೇತಿ ಉಪಯೋಗಿಸಿ, ಮನೆ ನಿರ್ಮಿಸಿಕೊಳ್ಳುತ್ತಾರೆ. ಅಂಥವರಿಗೆ ತೊಂದರೆ ನೀಡಬೇಡಿ ಎಂದು ಹೇಳಿದ್ದಾರೆ. ಸಕ್ರಮ ಮರಳುಗಾರಿಕೆ ನಿಂತು ಬಹಳ ದಿನವಾಗಿದ್ದು, ಜಿಲ್ಲೆಯ ಕೆಲವು ಭಾಗದಲ್ಲಿ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ತೊಂದರೆ ನೀಡಲು ಉದ್ದೇಶಪೂರ್ವಕವಾಗಿ ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಮನೆ ಬಳಕೆಗೆ ರೇತಿ ಉಪಯೋಗಿಸಿದವರ ಮೇಲೆ ದಾಳಿ ನಡೆಸಿ, ದಂಡ ವಿಧಿಸಿರುವುದು ತಪ್ಪು ಎಂದು ಹೇಳಿದ್ದಾರೆ ಎಂದರು.
ಸಿದ್ದಾಪುರ: ತಾಲೂಕಿನಲ್ಲಿ ಪ್ರಥಮ ಬಾರಿಗೆ ಬೆಳಗಾವಿ ವಿಭಾಗಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಹೊನಲು ಬೆಳಕು ಮತ್ತು ಹಗಲಿನ ವಾಲಿಬಾಲ್ ಕ್ರೀಡಾಕೂಟ ಪಟ್ಟಣದ ನೆಹರೂ ಮೈದಾನದಲ್ಲಿ ಅ. ೭ರಂದು ನಡೆಯಲಿದೆ.
ಸ್ವತ: ಕ್ರೀಡಾಪ್ರೇಮಿಯಾಗಿರುವ ಶಾಸಕ ಭೀಮಣ್ಣ ನಾಯ್ಕ ಅವರು ಕಳೆದ ಎರಡು ವಾರಗಳಿಂದ ವಿಶೇಷ ಗಮನಹರಿಸಿ, ಆ ಕುರಿತು ಸಭೆ ನಡೆಸಿ ಸೂಕ್ತ ವ್ಯವಸ್ಥೆಗೆ ನಿರ್ದೇಶನ ನೀಡಿದ್ದು, ವೇದಿಕೆ, ನೋಂದಣಿ, ಊಟ, ವಸತಿ, ಆರ್ಥಿಕ ಸಮಿತಿಗಳನ್ನು ರಚಿಸಿದ್ದು, ವಿವಿಧ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳ ಹಿರಿಯ ಶಿಕ್ಷಕರ ತಂಡ ರಚಿಸಿ ಸಮರ್ಪಕ ವ್ಯವಸ್ಥೆಯಾಗುವಂತೆ ನೋಡಿಕೊಂಡಿದ್ದಾರೆ. ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರ ಮಾರ್ಗದರ್ಶನ ಮತ್ತು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರ ನೇತೃತ್ವದಲ್ಲಿ ಉತ್ತಮ ನಿರ್ಣಾಯಕ ತಂಡವನ್ನು ರಚಿಸಲಾಗಿದೆ.ಬೆಳಗಾವಿ ವಿಭಾಗದ ೯ ಜಿಲ್ಲೆಗಳ ೩೬ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ. ಕ್ರೀಡಾಕೂಟದ ಯಶಸ್ಸಿಗೆ ಶಿಕ್ಷಣ ಇಲಾಖೆಯ ಜತೆಗೆ ಜಿಲ್ಲೆಯ ಮತ್ತು ತಾಲೂಕಿನ ವಿವಿಧ ಇಲಾಖೆಗಳು, ದಾನಿಗಳು, ಕ್ರೀಡಾಭಿಮಾನಿಗಳು, ಸಾರ್ವಜನಿಕರು ನಿರೀಕ್ಷೆಗೂ ಮೀರಿ ಕೈಜೋಡಿಸಿದ್ದಾರೆ.