ಸರ್ಕಾರ ಮೆಕ್ಕೆಜೋಳ ಬೆಳೆದ ರೈತರಿಗೆ ನಷ್ಟ ಪರಿಹಾರ ತುಂಬಲಿ: ಶಾಸಕ ಸಿ.ಎನ್.ಬಾಲಕೃಷ್ಣ ಒತ್ತಾಯ

KannadaprabhaNewsNetwork |  
Published : Jul 13, 2025, 01:18 AM IST
12ಎಚ್ಎಸ್ಎನ್11 : ಚನ್ನರಾಯಪಟ್ಟಣ ತಾಲೂಕು ಕಲ್ಕೆರೆ ವಡ್ಡರಹಳ್ಳಿ ಗ್ರಾಮದಲ್ಲಿ ಬಿಳಿ ಸುಳಿ ರೋಗಕ್ಕೆ ತುತ್ತಾದ ಮೆಕ್ಕೆಜೋಳವನ್ನು ಶಾಸಕ ಬಾಲಕೃಷ್ಣ ಕೃಷಿ ಇಲಾಖೆ ಅಧಿಕರಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ಸೇರಿದಂತೆ ಇತರೆ ರೋಗಗಳು ಕಂಡುಬರುತ್ತಿತ್ತು, ಇದೀಗ ಪ್ರಸಕ್ತ ವರ್ಷ ಬಿಳಿ ಸುಳಿ ರೋಗ ಆವರಿಸಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಮಾಹಿತಿಯನ್ನು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲು ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ಮಾಡುತ್ತಿರುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನಲ್ಲಿ ಪ್ರಸಕ್ತ ಸಾಲಿಗೆ ರೈತರು ಬೆಳೆಯಲಾಗಿರುವ ಮೆಕ್ಕಜೋಳಕ್ಕೆ ಬಿಳಿ ಸುಳಿ ರೋಗ ಬಾಧಿಸುತ್ತಿದ್ದು, ಲಕ್ಷಾಂತರ ರು. ನಷ್ಟ ಅನುಭವಿಸಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಪ್ರತಿ ಎಕರೆಗೆ ೨೫ ಸಾವಿರ ರು. ಪರಿಹಾರ ನೀಡಬೇಕೆಂದು ಸರ್ಕಾರವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.

ತಾಲೂಕಿನ ಕಸಬಾ ಹೋಬಳಿ ಕಲ್ಕೆರೆ ವಡ್ಡರಹಳ್ಳಿ ಬಳಿ ಬಿಳಿ ಸುಳಿ ರೋಗಕ್ಕೆ ತುತ್ತಾದ ಕೃಷಿ ಭೂಮಿಯನ್ನು ಕೃಷಿಇಲಾಖೆ ಅಧಿಕಾರಿಗಳೊಂದಿಗೆ ಕ್ಷೇತ್ರ ಭೇಟಿ ಮಾಡಿ, ರೋಗದಿಂದ ತುತ್ತಾಗಿರುವ ಮೆಕ್ಕೆಜೋಳವನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ತಾಲೂಕಿನಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ಸೇರಿದಂತೆ ಇತರೆ ರೋಗಗಳು ಕಂಡುಬರುತ್ತಿತ್ತು, ಇದೀಗ ಪ್ರಸಕ್ತ ವರ್ಷ ಬಿಳಿ ಸುಳಿ ರೋಗ ಆವರಿಸಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ. ಮಾಹಿತಿಯನ್ನು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲು ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ಮಾಡುತ್ತಿರುವುದಾಗಿ ಹೇಳಿದರು.

ತಾಲೂಕಿನ ಎಲ್ಲ ಹೋಬಳಿ ಸೇರಿದಂತೆ ೫೩೯೫ ಹೆಕ್ಟೇರ್‌ನಲ್ಲಿ ಮೆಕ್ಕಜೋಳ ಬಿತ್ತನೆ ಆಗಿ, ೧೨೦೦ ಹೆಕ್ಟೇರ್ ಪ್ರದೇಶದಲ್ಲಿ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಇದು ಹರಡುವ ರೋಗವಾಗಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುವ ಸಂಭವವಿದೆ. ರೈತರು ಪ್ರತಿ ಎಕರೆಗೆ ಮೆಕ್ಕೆಜೋಳ ಬೆಳೆಯಲು ೧೫ ರಿಂದ ೨೦ ಸಾವಿರ ರು. ಹಣ ವೆಚ್ಚ ಮಾಡುತ್ತಾರೆ. ಬೆಳೆ ಉತ್ತಮವಾಗಿ ಬಂದರೆ ಭರಿಸಿದ ಖರ್ಚು ಕಳೆದು ೩೦ ಸಾವಿರ ಅದಾಯ ಪಡೆಯತ್ತಾರೆ. ಆದರೆ ಪ್ರಸಕ್ತ ವರ್ಷ ಮೆಕ್ಕೆಜೋಳ ಬೆಳೆ ಬಿಳಿ ಸುಳಿ ರೋಗಕ್ಕೆ ತುತ್ತಾಗಿದೆ, ಹಾಗಾಗಿ ರಾಜ್ಯ ಸರ್ಕಾರ ಎಕರೆಗೆ ಕನಿಷ್ಠ ೨೫ ಸಾವಿರ ರು. ಪರಿಹಾರ ನೀಡಬೇಕು, ಈ ಬಗ್ಗೆ ಸೋಮವಾರದಂದು ನಡೆಯುವ ಜಿಲ್ಲಾ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಕೃಷಿ ಇಲಾಖೆಯಿಂದ ಪ್ರತಿ ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ ಮಾಡಿ ಯಾವ ರೈತ ಮೆಕ್ಕೆಜೋಳ ಬೆಳೆ ಬೆಳೆದಿದ್ದಾನೆ, ಎಷ್ಟು ಪ್ರದೇಶದಲ್ಲಿ ಬಿಳಿ ಸುಳಿ ರೋಗಕ್ಕೆ ಜೋಳ ಹಾಳಾಗಿದೆ ಎನ್ನುವುದನ್ನು ವರದಿ ತಯಾರು ಮಾಡಿ ಕೊಡುವುದಲ್ಲದೆ, ಈ ಬಗ್ಗೆ ಕೃಷಿ ಇಲಾಖೆ ಕೃಷಿ ವೆಬ್‌ಸೈಟ್‌ನಲ್ಲಿ ಸರ್ವೇ ನಂಬರ್ ಸಮೇತ ದಾಖಲು ಮಾಡಿದರೆ ಸರ್ಕಾರ ನೇರವಾಗಿ ನಷ್ಟವಾಗಿರುವ ರೈತರ ಖಾತೆಗೆ ನಷ್ಟದ ಹಣ ತುಂಬಲು ಅನುಕೂಲ ಆಗುತ್ತದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿಯವರನ್ನು ಭೇಟಿ ಮಾಡಿ ತಾಲೂಕಿನಲ್ಲಿ ಆಗಿರುವ ಬೆಳೆನಷ್ಟದ ಬಗ್ಗೆ ತಿಳಿಸುತ್ತೇನೆ ಹಾಗೂ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ರೈತರಿಗೆ ಭರವಸೆ ನೀಡಿದರು.

ಪ್ರಸಕ್ತ ವರ್ಷ ಮಳೆ ಕಡಿಮೆಯಾಗಿದೆ, ಇಂತಹ ವೇಳೆಯಲ್ಲಿ ರೈತರು ಸಾಲ ಮಾಡಿ ಕೃಷಿ ಮಾಡಿದ್ದಾರೆ. ಬೆಳೆ ಬೆಳೆಯಲು ರೈತರು ವೆಚ್ಚ ಮಾಡಿರುವ ಹಣವನ್ನಾದರೂ ಸರ್ಕಾರ ಭರಸಲಿ. ಇಲ್ಲದೆ ಹೋದರೆ ರೈತ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಂಡ ರಚನೆ ಮಾಡಿ ರೈತರು ಅನುಭಸುತ್ತಿರುವ ಯಾತನೆಯನ್ನು ಅಧ್ಯಯನ ಮಾಡಲಿ, ಈಗಾಗಲೇ ಬಿಳಿ ಸುಳಿ ರೋಗದ ಬಗ್ಗೆ ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ, ವರದಿ ಬಂದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ ಕುಮಾರ್, ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಿರಣ್, ಆತ್ಮ ಯೋಜನೆ ತಾಲೂಕು ವ್ಯವಸ್ಥಾಪಕ ಶ್ರೀನಿವಾಸ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿದ್ಯಾವೇಗೌಡ, ಕಲಸಿಂದ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜ್ಞಾನೇಶ್, ಮುಖಂಡರಾದ ಪಾಲಾಕ್ಷ, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ