ತಾಯಕನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ
ಇಂದಿನ ಆರೋಗ್ಯ, ಜೀವನಶೈಲಿಯಿಂದ ಜನತೆಯ ಆರೋಗ್ಯ ದಿನೇ ದಿನೇ ಹದಗೆಡುತ್ತಿರುವುದರಿಂದ ಎಲ್ಲರೂ ದುಡಿಮೆಗಿಂತ ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಕಿವಿಮಾತು ಹೇಳಿದರು.
ತಾಲೂಕಿನ ಗಡಿಭಾಗದ ತಾಯಕನಹಳ್ಳಿ ಗ್ರಾಮದಲ್ಲಿ ತುಮಕೂರಿನ ಅಕ್ಷರಾ ಐ ಫೌಂಡೇಶನ್ ಹಾಗೂ ಡಾ. ಎನ್.ಟಿ. ಶ್ರೀನಿವಾಸ್ ಅವರ ವೈದ್ಯ ಸ್ನೇಹಿತರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪಟ್ಟಣ ನಗರ ಪ್ರದೇಶಗಳಿಗಷ್ಟೇ ಆರೋಗ್ಯ ಸೌಲಭ್ಯಗಳು ಸಿಗುತ್ತವೆ. ಆದರೆ ಗ್ರಾಮೀಣ ಜನರ ಆರೋಗ್ಯ ಕಾಳಜಿ ಮಾಡುವ ಉದ್ದೇಶದಿಂದ ನಮ್ಮ ತಂದೆಯ ಸ್ಮರಣಾರ್ಥ ಇಂತಹ ಶಿಬಿರಗಳನ್ನ ಕ್ಷೇತ್ರದಲ್ಲಿ ಆಗಾಗ್ಗೆ ಆಯೋಜನೆ ಮಾಡುತ್ತಿದ್ದೇವೆ. ಇದಕ್ಕೆ ನನ್ನ ವೈದ್ಯ ಸ್ನೇಹಿತರು ನನ್ನ ಬೆನ್ನಿಗೆ ನಿಂತು ಸೇವೆ ಸಲ್ಲಿಸುತ್ತಿದ್ದಾರೆ. ಬಡ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸಹ ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ ಸೇವೆ ಸಲ್ಲಿಸಿದರು. ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆ ಬಡಜನತೆಯನ್ನು ಆತಂಕಕ್ಕೀಡು ಮಾಡಿದೆ. ನಾನು ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗೆ ಇದೆ. ನಾನು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡಜನರ ಸೇವೆ, ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದರು.