ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಆಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರು ಸೂಚಿಸಿದ್ದಾರೆ.
- ಕೃಷಿ, ತೋಟಗಾರಿಕೆ ಇಲಾಖೆ, ತಾಲೂಕು ಆಡಳಿತಕ್ಕೆ ಶಾಸಕ ಸಮರ್ಥ ಆದೇಶ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಆಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರು ಸೂಚಿಸಿದರು.
ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಜಿಲ್ಲೆಯಲ್ಲಿ ಕೈಗೊಂಡ ಬರ ನಿರ್ವಹಣಾ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆ, ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದರು.
ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯಲ್ಲಿ ಕೈಗೊಂಡ ಬರ ನಿರ್ವಹಣಾ ಕ್ರಮಗಳನ್ನು ಜವಾಬ್ದಾರಿಯಿಂದ ಅನುಷ್ಠಾನಗೊಳಿಸಬೇಕು. ಜನರಿಗೆ ಮೇವು, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳಿಗೆ ಯಾವುದೇ ರೀತಿ ಕೊರತೆ ಆಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ಸರ್ಕಾರದ ಮಾರ್ಗಸೂಚಿಗಳ ಅನ್ವಯ ತ್ವರಿತವಾಗಿ ಸೂಕ್ತ ಪರಿಹಾರ ಒದಗಿಸಬೇಕು. ಇ-ಸ್ವತ್ತು ಹಾಗೂ ಹಕ್ಕುಪತ್ರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಬೇಕು. ಇಂತಹ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇ ಮಾಡಿ, ಅನಗತ್ಯ ವಿಳಂಬಕ್ಕೆ ಅವಕಾಶ ನೀಡದೇ, ಶೀಘ್ರವಾಗಿ ಪರಿಹಾರ ಕಲ್ಪಿಸಿ ಎಂದು ಅವರು ಆದೇಶಿಸಿದರು.
ತಾಲೂಕು ಪಂಚಾಯಿತಿ, ತಾಲೂಕು ಕಚೇರಿ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಇದ್ದರು. ದಾವಣಗೆರೆ ತಾಲೂಕಿನ ರೈತರಿಗೆ ಬೆಳೆ ವಿಮೆ ಯೋಜನೆ ಕುರಿತು ಸಮಗ್ರ ಮಾಹಿತಿ ತಲುಪಿಸಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ಪ್ರಚಾರ ವಾಹನಕ್ಕೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶಾಸಕ ಸಮರ್ಥ ಎಂ. ಶಾಮನೂರು ಚಾಲನೆ ನೀಡಿದರು.
- - -
(ಬಾಕ್ಸ್)
* ನೀಟ್ ಪರೀಕ್ಷೆ ಆನ್‌ಲೈನ್ ಮಾಡ್ಲಿ, ಸಮಸ್ಯೆ ಇರಲ್ಲ: ಶಾಸಕ ಸಮರ್ಥ
ದಾವಣಗೆರೆ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ರಾಜಕೀಯ ತರುತ್ತಿದ್ದು, ಇಷ್ಟು ದೊಡ್ಡ ಹೋರಾಟವಾಗಲು ಕಾರಣ ಪ್ರಶ್ನೆಪತ್ರಿಕೆಗಳು ಯಾವಾಗಲೂ ಸೋರಿಕೆಯಾಗುತ್ತಿವೆ. ದೇಶದಲ್ಲಿ ನೀಟ್ ಪರೀಕ್ಷಾ ವ್ಯವಸ್ಥೆ ಸರಿಯಾಗಿಯೇ ಆಗುತ್ತಿಲ್ಲ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಎಂ. ಶಾಮನೂರು ಬೇಸರ ವ್ಯಕ್ತಪಡಿಸಿದರು.ನಗರದ ನೂತನ ತಾಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ವಿಚಾರದಲ್ಲಿ ರಾಜಕೀಯ ತರುವುದು ಸರಿಯಲ್ಲ. ನೀಟ್ ಪರೀಕ್ಷೆ ವಿಚಾರದಲ್ಲೇ 20 ವಿದ್ಯಾರ್ಥಿಗಳು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ದೇಶದಲ್ಲಿ ನೀಟ್ ಪರೀಕ್ಷಾ ವ್ಯವಸ್ಥೆ, ಪದ್ಧತಿ ಬದಲಾವಣೆ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಏನನ್ನೂ ಮಾತನಾಡುತ್ತಿಲ್ಲ. ಇದರಿಂದ ಸಂಬಂಧಿಸಿದ ಕೇಂದ್ರ ಸಚಿವರ ರಾಜೀನಾಮೆ ಕೇಳಲಾಗುತ್ತಿದೆ. ಒಂದು ಪ್ರಶ್ನೆಪತ್ರಿಕೆಯ ಪತ್ರಿಕೆ ಮುದ್ರಣ ಆಗುವಾಗ, ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ಹೋಗುವಾಗ ಸೋರಿಕೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಇನ್ನಾದರೂ ನೀಟ್ ಪರೀಕ್ಷೆಗಳನ್ನು ಆನ್‌ಲೈನ್ ವ್ಯವಸ್ಥೆ ಮೂಲಕ ತರುವ ಕೆಲಸವಾಗಬೇಕು. ಆನ್ ಲೈನ್ ಪರೀಕ್ಷೆ ನಡೆಸಿದರೆ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯೇ ಆಗುವುದಿಲ್ಲ. ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯುವ ಪೀಳಿಗೆಯವರಿದ್ದಾರೆ. ಹಾಗಾಗಿಯೇ, ಈ ರೀತಿ ಹೋರಾಟ ಆಗುತ್ತಿವೆ. ನೀಟ್ ಪರೀಕ್ಷೆ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ಬದಲಾವಣೆಗಳನ್ನು ತರುವ ಅವಶ್ಯಕತೆ, ಅಗತ್ಯವೂ ಇದೆ ಎಂದರು.- - -
(ಸಮರ್ಥ ಶಾಮನೂರು)- - -
-23ಕೆಡಿವಿಜಿ8, 9:
ದಾವಣಗೆರೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಮರ್ಥ ಎಂ. ಶಾಮನೂರು ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.