ಕನ್ನಡಪ್ರಭ ವಾರ್ತೆ ಬೇಲೂರು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೇಲೂರು ತಾಲೂಕಿಗೆ ಪ್ರಥಮ ಸ್ಥಾನ ಮತ್ತು ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೇಲೂರಿನ ಕೀರ್ತಿಯನ್ನು ಹೆಚ್ಚಿಸಿದ ಹಂಸ ಎಂಬ ವಿದ್ಯಾರ್ಥಿಯನ್ನು ಬೇಲೂರಿನ ಶಾಸಕ ಎಚ್.ಕೆ.ಸುರೇಶ್ ಹಾಗೂ ಕಸಾಪ ವತಿಯಿಂದ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು.ಬೇಲೂರು ಪಟ್ಟಣದ ಪೂರ್ಣಪ್ರಜ್ಞ ಶಾಲೆಯ ಹಂಸ ಎಂಬ ವಿಧ್ಯಾರ್ಥಿ 625ಕ್ಕೆ 624 ಅಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಮತ್ತು ಬೇಲೂರಿಗೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ಈ ಬಾರಿ ಫಲಿತಾಂಶದಲ್ಲಿ ಬೇಲೂರಿನಲ್ಲಿ ಉತ್ತಮ ಸಾಧನೆ ಮಾಡಿರುವುದು ಸಂತೋಷದ ವಿಚಾರವಾಗಿದೆ. ತಾಲೂಕಿನ ಅಡಗೂರು ಅಲದಹಳ್ಳಿ ಗ್ರಾಮದ ಶಾಂತೇಗೌಡ ಸುಪುತ್ರಿ ಹಂಸ ಎಂಬ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ತಂದಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಪ್ರಗತಿ ಮತ್ತು ಅವರ ಸಾಮಾನ್ಯ ಜ್ಞಾನ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳು ಅಂಕದ ಜೊತೆಯಲ್ಲಿ ಸಾಮಾನ್ಯ ಜ್ಞಾನವನ್ನು ಪತ್ರಿಕೆಗಳನ್ನು ಓದುವ ಮೂಲಕ ಬೆಳಸಿಕೊಳ್ಳಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ತಾಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಹಂಸ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಬೇಕಿದೆ. ಹಂಸ ಅವರು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಭಾಗವಹಿಸುವುದರ ಮೂಲಕವಾಗಿ ಸರ್ಕಾರದ ಅತ್ಯುನ್ನತ ಸ್ಥಾನವನ್ನು ಪಡೆಯುವ ಮೂಲಕ ಕೀರ್ತಿಯನ್ನು ತರಬೇಕು. ಶಾಸಕರು ಈ ಹಿಂದಿನಿಂದಲೂ ಕೂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತವಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಆರ್ ಎಸ್ ಮಹೇಶ್, ಉಪಾಧ್ಯಕ್ಷ ಚಂದ್ರು, ಗುರುರಾಜ್ ಸಂಘಟನಾ ಕಾರ್ಯದರ್ಶಿಗಳಾದ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾದ ಮಾರುತಿ, ಹಂಸ ಅವರ ತಂದೆ ಶಾಂತೇಗೌಡ, ತಾಯಿ ಜ್ಯೋತಿ ಹಾಜರಿದ್ದರು.