ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ರಥೋತ್ಸವ ವೈಭವದಿಂದ ನಡೆಸಲು ತೀರ್ಮಾನ

KannadaprabhaNewsNetwork |  
Published : Feb 04, 2024, 01:32 AM IST
67 | Kannada Prabha

ಸಾರಾಂಶ

ಸ್ವಾಮಿಯವರ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ತಾಲೂಕು ಆಡಳಿತ, ಪುರಸಭೆ ಮತ್ತು ತಾಲೂಕು ಪಂಚಾಯಿತಿಯವರು ಇತರೆ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಸಮನ್ವಯತೆ ಸಾಧಿಸಿ ಉತ್ತಮವಾಗಿ ಜಾತ್ರೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ದೇವಾಲಯ ಜೀರ್ಣೋದ್ದಾರದ ಹಿನ್ನೆಲೆ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಹೊರ ವಲಯದಲ್ಲಿರುವ ಹಳೆ ಎಡತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯ ರಥೋತ್ಸವವನ್ನು ಅತ್ಯಂತ ವೈಭವದಿಂದ ನಡೆಸಲು ತೀರ್ಮಾನಿಸಿತು.

ಪಟ್ಟಣದ ಆಡಳಿತ ಸೌಧದ ಕಚೇರಿಯಲ್ಲಿರುವ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶನಿವಾರ ಶಾಸಕ ಡಿ. ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರು, ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಶಾಸಕ ಡಿ. ರವಿಶಂಕರ್ ಮಾತನಾಡಿ, ಫೆ. 10 ರಿಂದ 21ರವರೆಗೆ ಅರ್ಕೇಶ್ವರ ಸ್ವಾಮಿಯವರ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ತಾಲೂಕು ಆಡಳಿತ, ಪುರಸಭೆ ಮತ್ತು ತಾಲೂಕು ಪಂಚಾಯಿತಿಯವರು ಇತರೆ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಸಮನ್ವಯತೆ ಸಾಧಿಸಿ ಉತ್ತಮವಾಗಿ ಜಾತ್ರೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಮೂರು ತಾಸುಗಳ ಕಾಲ ಸುದೀರ್ಘ ಸಭೆ ನಡೆಸಿದ ಶಾಸಕರು, ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಇಲಾಖಾವಾರು ಜವಾಬ್ದಾರಿ ಹಂಚಿದದಲ್ಲದೆ, ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪುರಸಭೆಯವರು ಪಟ್ಟಣದ ಗರುಡಗಂಭದ ವೃತದಿಂದ ಅರ್ಕೇಶ್ವರ ದೇವಾಲಯದವರೆಗೆ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕಲ್ಲದೆ ರಸ್ತೆಯ ಉದ್ದಕ್ಕೂ ತಳಿರು ಮತ್ತು ತೋರಣಗಳಿಂದ ಅಲಂಕರಿಸಿ ಕೆ.ಆರ್. ನಗರದೊಂದಿಗೆ ಸುತ್ತಮುತ್ತಲ ಹಳ್ಳಿಗಳಲ್ಲಿಯೂ ವ್ಯಾಪಕ ಪ್ರಚಾರ ಮಾಡಬೇಕೆಂದು ಆದೇಶಿಸಿದರು.

ನಾಳೆಯಿಂದಲೆ ದೇವಾಲಯವನ್ನು ಸ್ವಚ್ಛಗೊಳಿಸಿ ಜಾತ್ರಾ ಸಿದ್ಧತೆ ಆರಂಭಿಸಬೇಕೆಂದು ಹೇಳಿದರಲ್ಲದೆ, ದೇವಾಲಯದ ಸುತ್ತ ಪೂರ್ಣವಾಗಿ ಕಸ ಮುಕ್ತ ವಲಯ ಮಾಡಿ ನಿಗದಿತ ಸ್ಥಳದಲ್ಲಿ ಸಿಹಿ ತಿಂಡಿ ಮತ್ತು ಇತರೆ ಅಂಗಡಿಗಳು ಇರುವಂತೆ ನೋಡಿಕೊಂಡು ಮತ್ತೊಮ್ಮೆ ಎಲ್ಲ ಅಧಿಕಾರಿಗಳು ಸಭೆ ನಡೆಸಿ ನನಗೆ ವರದಿ ನೀಡಬೇಕೆಂದು ತಾಕೀತು ಮಾಡಿದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್. ನಾಗೇಂದ್ರ, ಮಾಜಿ ನಿರ್ದೇಶಕ ಎಚ್.ಪಿ. ಪ್ರಶಾಂತ್, ಕನ್ನಡಪ್ರಭ ವರದಿಗಾರ ಕುಪ್ಪೆ ಮಹದೇವಸ್ವಾಮಿ, ಪುರಸಭೆ ಸದಸ್ಯರಾದ ಪ್ರಕಾಶ್, ನಟರಾಜು, ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಮಾಜಿ ಸದಸ್ಯ ನಂಜುಂಡ ಮತ್ತಿತರರು ಮಾತನಾಡಿ, ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷರಾದ ಕೆ. ಜಿ. ಸುಬ್ರಹ್ಮಣ್ಯ, ನರಸಿಂಹರಾಜು, ಸದಸ್ಯ ಶಂಕರಸ್ವಾಮಿ, ಮಾಜಿ ಸದಸ್ಯ ಕೆ. ವಿನಯ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ರಮೇಶ್, ಪ್ರಧಾನ ಕಾರ್ಯದರ್ಶಿ ಮಹದೇವ್ ವಕ್ತಾರ ಸೈಯದ್ ಜಾಬೀರ್ ತಾಲೂಕು ಕಾಂಗ್ರೆಸ್ ಪ. ವಿಭಾಗದ ಅಧ್ಯಕ್ಷ ಮಹದೇವ ನಾಯಕ, ಎಸ್.ಟಿಎಪಿಸಿಎಂಎಸ್ ನಿರ್ದೇಶಕ ಡಿ.ಸಿ. ರವಿ, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಇಒ ಜಿ.ಕೆ. ಹರೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಡಿ. ನಟರಾಜು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಿ.ಜೆ. ನವೀನ್, ಸೆಸ್ಕಾಂ ಎಇಇ ಅರ್ಕೇಶ್ವರ ಮೂರ್ತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್‌.ಎಂ. ಅಶೋಕ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಇದ್ದರು.

14ಕ್ಕೆ ಪಾರ್ವತಿ ಕಲ್ಯಾಣ, 16ಕ್ಕೆ ಬ್ರಹ್ಮ ರಥೋತ್ಸವ

- 10 ರಿಂದ ಜಾನುವಾರುಗಳ ಜಾತ್ರೆಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪಟ್ಟಣದ ಹೊರ ವಲಯದಲ್ಲಿರುವ ಹಳೆ ಎಡ ತೊರೆಯ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ. 10 ರಿಂದ 21ರವರೆಗೆ ನಡೆಯಲಿದೆ ಎಂದು ಶಾಸಕ ಡಿ. ರವಿಶಂಕರ್ ತಿಳಿಸಿದರು. ಪಟ್ಟಣದ ಆಡಳಿತ ಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 10 ರಿಂದ ಜಾನುವಾರು ಜಾತ್ರೆ ನಡೆಯಲಿದ್ದು, 14 ರಂದು ಬುಧವಾರ ಪಾರ್ವತಿ ಕಲ್ಯಾಣ, 16 ರಂದು ಶುಕ್ರವಾರ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.

ಆ ನಂತರ 18ರಂದು ಭಾನುವಾರ ಕಾವೇರಿ ನದಿಯಲ್ಲಿ ತಪ್ಪೋತ್ಸವ ಜರುಗಲಿದ್ದು, 11 ದಿನಗಳು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

---------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು