ಕನ್ನಡಪ್ರಭ ವಾರ್ತೆ ಪಾಂಡವಪುರ
ಮೇಲುಕೋಟೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ 11 ತಿಂಗಳಲ್ಲಿ 6ನೇ ಬಾರಿಗೆ ದರ್ಶನ್ ಪುಟ್ಟಣ್ಣಯ್ಯ ಅವರು ಅಮೆರಿಕಾಗೆ ತೆರಳಿದ್ದು ಸಾರ್ವಜನಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಮಾ.22ರಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಿ ಅಂದೇ ಸಂಜೆ ಅಮೆರಿಕಾಗೆ ತೆರಳಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚುನಾವಣೆ ಸಂದರ್ಭದಲ್ಲಿ ವಾಪಸ್ಸಾಗಿದ್ದರು. ಬಳಿಕ ಮತದಾನ ಮುಗಿಯುತ್ತಿದ್ದಂತೆಯೇ ಮತ್ತೆ ಅಮೆರಿಕಾಗೆ ತೆರಳಿದ್ದಾರೆ.ವಿಡಿಯೋ ಕಾಲ್ ಮೂಲಕ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮತದಾನ ಮಾಡಿದ ಬಗ್ಗೆ ಕೃತಜ್ಞತೆ ಸಲ್ಲಿಸಿ ಫ್ಲೈಟ್ ಏರಿದ್ದಾರೆ. ಕಳೆದ ಚುನಾವಣೆ ವೇಳೆ ಅಮೆರಿಕಾದಲ್ಲಿರುವ ಎಲ್ಲಾ ಕಂಪನಿ ಮಾರಾಟ ಮಾಡಿ ವಾಪಸ್ಸಾಗಿದ್ದೇನೆ. ಮತ್ತೆ ಅಮೆರಿಕಾಗೆ ಹೋಗಲ್ಲ. ಇಲ್ಲಿಯೇ ಇದ್ದು ಜನರ ಸೇವೆ ಮಾಡುತ್ತೇನೆ ಎಂದು ಕ್ಷೇತ್ರದ ಮತದಾರರಿಗೆ ಅಭಯ ನೀಡಿದ್ದರು.
ಕ್ಷೇತ್ರದ ಜನತೆ ಭೀಕರ ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಜನ-ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಕುಡಿಯುಲು ನೀರಿಲ್ಲದೆ ಜನರು ಪರದಾಡುವಂತಾಗಿದೆ. ಕೆರೆಕಟ್ಟೆಗಳು ಒಣಗಿವೆ. ಬೆಳೆ ಒಣಗುತ್ತಿದ್ದು ರೈತರು ಸಂಕಷ್ಟದಲ್ಲಿದ್ದಾರೆ.
ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ. ಶಾಸಕರು ಕ್ಷೇತ್ರದಲ್ಲಿ ಇದ್ದಾಗಲೇ ಅಧಿಕಾರಿಗಳು ಸಾರ್ವಜನಿಕರು, ರೈತ ಸಮಸ್ಯೆಗಳನ್ನು ಆಲಿಸುವುದು ಕಷ್ಟ. ಇನ್ನೂ ಅಮೆರಿಕಾಗೆ ತೆರಳಿದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.