ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳ ಮೇಲೆ ಕ್ರಮ ಕೈಗೊಳ್ಳಲು ಶಾಸಕ ದೇಶಪಾಂಡೆ ಸೂಚನೆ

KannadaprabhaNewsNetwork | Updated : Oct 17 2024, 12:06 AM IST

ಸಾರಾಂಶ

ಅರಣ್ಯ ಇಲಾಖೆಯವರು ಇಂತಹ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್‌ಗಳ ಮೇಲೆ ನೋಟಿಸ್ ನೀಡಬೇಕು. ಪ್ರತಿಕ್ರಿಯಿಸದಿದ್ದರೆ ಕಾನೂನು ಕ್ರಮ ಕೈಗೊಂಡು ಅವರ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಶಾಸಕ ಆರ್.ವಿ. ದೇಶಪಾಂಡೆ ಎಚ್ಚರಿಸಿದರು.

ಹಳಿಯಾಳ: ದಾಂಡೇಲಿ- ಜೋಯಿಡಾ ತಾಲೂಕಿನಲ್ಲಿರುವ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್‌ಗಳ ಮೇಲೆ ಕಾನೂನು ಕ್ರಮವನ್ನು ಅರಣ್ಯ ಇಲಾಖೆಯವರು ಕೈಗೊಳ್ಳಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಇಕೋ- ಟೂರಿಸಂ ಬೆಳೆಯುತ್ತಿದ್ದು, ದೇಶ- ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಪರಿಸರ ಪ್ರವಾಸೋದ್ಯಮ ಬೆಳೆಯುತ್ತಿದೆ. ಆದರೆ ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಕೆಲವೆಡೆ ಹೋಮ್ ಸ್ಟೇ, ರೆಸಾರ್ಟ್‌ಗಳನ್ನು ಅರಣ್ಯ ಅತಿಕ್ರಮಿಸಿಕೊಂಡು ಆರಂಭಿಸಲಾಗಿದ್ದು, ಇದು ಸರಿಯಲ್ಲ. ಅರಣ್ಯ ಇಲಾಖೆಯವರು ಇಂತಹ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್‌ಗಳ ಮೇಲೆ ನೋಟಿಸ್ ನೀಡಬೇಕು. ಪ್ರತಿಕ್ರಿಯಿಸದಿದ್ದರೆ ಕಾನೂನು ಕ್ರಮ ಕೈಗೊಂಡು ಅವರ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಎಚ್ಚರಿಸಿದರು.

ಶಾಲೆಗಳಿಗೆ ಅನುದಾನ: ತಾಲೂಕಿನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಸಾಂಬ್ರಾಣಿ(ಎಸ್‌ಟಿ) ನೂತನ ಕಟ್ಟಡ ನಿರ್ಮಾಣಕ್ಕಾಗಿ ನಾಗಶೆಟ್ಟಿಕೊಪ್ಪದಲ್ಲಿ 6 ಎಕರೆ ಜಮೀನನ್ನು ಮೀಸಲಾಗಿಡಲಾಗಿದ್ದು, ಸರ್ಕಾರ ₹20 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮುರ್ಕವಾಡ(ಎಸ್‌ಸಿ) ದಕ್ಕೆ ಜೋಗನಕೊಪ್ಪದಲ್ಲಿ 10 ಎಕರೆ ಜಮೀನು ಮೀಸಲಾಗಿಟ್ಟಿದ್ದು, ಸರ್ಕಾರ ₹22 ಕೋಟಿ ಅನುದಾನ ಮಂಜೂರು ಮಾಡಿದೆ, ದಾಂಡೇಲಿಯಲ್ಲಿ ಅಗ್ನಿಶಾಮಕ ದಳ ಕಚೇರಿ ನಿರ್ಮಾಣಕ್ಕಾಗಿ ₹3 ಕೋಟಿ ಮಂಜೂರಾಗಿದೆ. ಈ ಎಲ್ಲ ಕಾಮಗಾರಿಗಳ ಟೆಂಡರ್‌ಗಳನ್ನು ಕರೆಯಲಾಗಿದ್ದು, ಅತೀ ಶೀಘ್ರ ಕಾಮಗಾರಿಯು ಆರಂಭವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ಪ್ರಮುಖರಾದ ಸತ್ಯಜತ ಗಿರಿ, ರವಿ ತೋರಣಗಟ್ಟಿ, ರೋಹನ ಬ್ರಗಾಂಜಾ ಇತರರು ಇದ್ದರು. ನಾಳೆ ದಾಂಡೇಲಿಯಲ್ಲಿ ಆದಾಯ ತೆರಿಗೆ ಜಾಗೃತಿ ಕಾರ್ಯಾಗಾರ

ದಾಂಡೇಲಿ: ಆದಾಯ ತೆರಿಗೆ ಜಾಗೃತಿ ಕಾರ್ಯಾಗಾರವನ್ನು ಹುಬ್ಬಳ್ಳಿ ಆದಾಯ ತೆರಿಗೆ ಟಿಡಿಎಸ್ ರೇಂಜ್‌ನ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಹಳಿಯಾಳ ವಿಭಾಗದವರ ಸಹಕಾರದೊಂದಿಗೆ ಅ. ೧೮ರಂದು ದಾಂಡೇಲಿ ಅರಣ್ಯ ಇಲಾಖೆಯ ಹಾರ್ನಬಿಲ್ ಭವನದಲ್ಲಿ ನಡೆಯಲಿದೆ.ಅಂದು ಬೆಳಗ್ಗೆ ೧೧ ಗಂಟೆಗೆ ಆರಂಭವಾಗುವ ಕಾರ್ಯಾಗಾರದಲ್ಲಿ ಮೊದಲು ಟಿಡಿಎಸ್ ರೇಂಜ್‌ನ ಅಧಿಕಾರಿಗಳು ಸರ್ಕಾರಿ ಇಲಾಖೆಗಳಿಗೆ ಅನ್ವಯವಾಗುವ ಆದಾಯ ತೆರಿಗೆ ಕಾನೂನಿನ ಟಿಡಿಎಸ್ ಕಲಂಗಳನ್ನು ವಿವರಿಸಲಿದ್ದಾರೆ. ನಂತರ ಟಿಡಿಎಸ್ ರೇಂಜ್‌ನ ಅಧಿಕಾರಿಗಳು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.ಮಧ್ಯಾಹ್ನ ೨ ಗಂಟೆಗೆ ಸನ್ನದು ಲೆಕ್ಕಪಾರಿಶೋಧಕ ಅಂ. ಸುವ್ರಹ್ಮಣ್ಯ ಗಾಂವಕರ್ ಮಾತನಾಡುವರು. ಆದಾಯ ತೆರಿಗೆ ಟಿಡಿಎಸ್ ಕಲಂಗಳಲ್ಲಿ ಇತ್ತೀಚಿಗಿನ ಬದಲಾವಣೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ.

Share this article