ಶ್ವಾನ ಸಂತಾನಹರಣ ಕಾರ್ಯಕ್ಕೆ ಶಾಸಕ ಸಮರ್ಥ ಚಾಲನೆ

KannadaprabhaNewsNetwork |  
Published : May 22, 2026, 01:30 AM IST
21ಕೆಡಿವಿಜಿ1, 2, 3, 4-ದಾವಣಗೆರೆ ದಕ್ಷಿಣ ಕ್ಷೇತ್ರದ ದೇವರಾಜ ಅರಸು ಬಡಾವಣೆಯ ವ್ಯಾಪ್ತಿಯಲ್ಲಿ ಶ್ವಾನಗಳ ಸಂತಾನ ಹರಣ ಕಾರ್ಯಾಚರಣೆ ಶುರುವಾದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಶಾಸಕ ಸಮರ್ಥ ಎಂ.ಶಾಮನೂರು, ಪಾಲಿಕೆ ಆಯುಕ್ತ ಮಹಾಂತೇಶ ಇತರೆ ಅಧಿಕಾರಿಗಳು, ಸಿಬ್ಬಂದಿ. | Kannada Prabha

ಸಾರಾಂಶ

ರೋಗಗ್ರಸ್ತ, ವ್ಯಗ್ರ, ಹುಚ್ಚು ನಾಯಿಗಳಿಗೆ ಇನ್ನು ದಯಾಮರಣ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆದೇಶ ಹೊರಡಿಸಿದ ಬೆನ್ನಲ್ಲೇ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಪಾಲಿಕೆ ಆಡಳಿತ ಯಂತ್ರ ಚಾಲನೆ ನೀಡಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರೋಗಗ್ರಸ್ಥ, ವ್ಯಗ್ರ, ಹುಚ್ಚು ನಾಯಿಗಳಿಗೆ ಇನ್ನು ದಯಾಮರಣ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಆದೇಶ ಹೊರಡಿಸಿದ ಬೆನ್ನಲ್ಲೇ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಪಾಲಿಕೆ ಆಡಳಿತ ಯಂತ್ರ ಚಾಲನೆ ನೀಡಿದೆ.

ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೇವರಾಜ ಅರಸು ಬಡಾವಣೆಯ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡುವ ಕಾರ್ಯಕ್ಕೆ ಗುರುವಾರದಿಂದ ಚಾಲನೆ ನೀಡಿದ್ದ ಹಿನ್ನೆಲೆ ನೂತನ ಶಾಸಕ ಸಮರ್ಥ ಎಂ.ಶಾಮನೂರು ಸ್ಥಳಕ್ಕೆ ಭೇಟಿ ನೀಡಿ, ರೇಬೀಸ್ ಸೋಂಕಿತ ಅಥವಾ ತುಂಬಾ ಆಕ್ರಮಣಕಾರಿ ನಾಯಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪಾಲಿಕೆ ಕೈಗೊಂಡು, ಜನರಿಗೆ ನಾಯಿಗಳಿಂದ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಿ ಎಂದರು.

ಬೀದಿ ನಾಯಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ. ನಾಯಿ ಕಚ್ಚಿಸಿಕೊಂಡವರು ಚಿಕಿತ್ಸೆ ಪಡೆದ ನಂತರ ತಮಗೆ ಕಚ್ಚಿದ್ದ ನಾಯಿ ಹಾಗೂ ಅದು ಇರುವ ಸ್ಥಳದ ಬಗ್ಗೆ ಪಾಲಿಕೆ ಗಮನಕ್ಕೆ ತರಬೇಕು. ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುವುದು ಸೂಕ್ತ ಕ್ರಮವಾಗಿದೆ. ರೇಬೀಸ್ ಸೋಂಕಿತ ಅಥವಾ ತುಂಬಾ ಅಕ್ರಮಣಕಾರಿ ನಾಯಿಗಳನ್ನು ಸೆರೆಹಿಡಿದು ಅಗತ್ಯ ಚಿಕಿತ್ಸೆ ಮತ್ತು ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ಜೊತೆಗೆ ವಶು ವೈದ್ಯಕೀಯ ಇಲಾಖೆ ವೈದ್ಯರ ಸಹಕಾರ ಪಡೆಯಬೇಕು ಎಂದರು.

ಈಚೆಗೆ ಬೀದಿನಾಯಿಗಳ ಉಪಟಳ ಹೆಚ್ಚಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಎಲ್ಲಾ ಬೀದಿ ನಾಯಿಗಳು ಹುಚ್ಚು ನಾಯಿಗಳಲ್ಲ. ಒಂದು ಹುಚ್ಚು ನಾಯಿ 50 ಕಿಮೀ ಕ್ರಮಿಸಿ ಸರಾಸರಿ 100 ಪ್ರಾಣಿಗಳಿಗೆ ಕಚ್ಚಿ ರೇಬೀಸ್‌ ರೋಗ ಹರಡಬಹುದು. ಸಾರ್ವಜನಿಕರು ಉಳಿದ ಆಹಾರ ತ್ಯಾಜ್ಯವನ್ನು ಪಾಲಿಕೆ ವಾಹನಕ್ಕೆ ನೀಡದೇ ಎಲ್ಲೆಂದರಲ್ಲಿ ಎಸೆಯುವುದರಿಂದಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಾಲಿಕೆ ಆಯುಕ್ತ ಮಹಾಂತೇಶ ಮಾತನಾಡಿ, ಶ್ವಾನಗಳ ವಿರುದ್ಧದ ಕಾರ್ಯಾಚರಣೆಯನ್ನು ದಾವಣಗೆರೆ ನಗರದ ಎಲ್ಲಾ ವಾರ್ಡ್ಗಳಲ್ಲೂ ಕೈಗೊಳ್ಳಲಾಗುವುದು. ಪ್ರಸಕ್ತ ವರ್ಷದಲ್ಲಿ 5500ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮತ್ತು ರೇಬೀಸ್ ನಿರೋಧಕ ಲಸಿಕೆ ನೀಡಲು ಉದ್ದೇಶಿಸಿದ್ದೇವೆ. ಪ್ರತಿದಿನ 20 ನಾಯಿ ಹಿಡಿದು ದಾವಣಗೆರೆ ಹೊರ ವಲಯದ ಎಬಿಸಿ ಸೆಂಟರ್ ನಲ್ಲಿ ಸಂತಾನ ಹರಣ ಚಿಕಿತ್ಸೆ ಮಾಡಿ, ರೇಬೀಸ್ ನಿರೋಧಕ ಲಸಿಕೆ ನೀಡಿ 3 ದಿನ ಆರೈಕೆ ನಂತರ ಅದೇ ಸ್ಥಳದಲ್ಲಿ ಬಿಡಲಾಗುವುದು ಎಂದರು.

ಸಂತಾನ ಹರಣ ಚಿಕಿತ್ಸೆ ಜವಾಬ್ದಾರಿಯನ್ನು ಎಎಸ್ಆರ್‌ಎ ಸಂಸ್ಥೆಗೆ ವಹಿಸಿದ್ದು, ಸಂಸ್ಥೆಯವರು ಬೀದಿ ನಾಯಿಗಳಿಗೆ ಮಾತ್ರ ಸಂತಾನ ಹರಣ ಚಿಕಿತ್ಸೆ ಮಾಡುವರು. ರೇಬಿಸ್ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಂದ ದೂರು ಕೇಳಿ ಬಂದ ಕಡೆಗಳಲ್ಲಿ ಪಾಲಿಕೆಯಿಂದ ಶ್ವಾನಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳುವಂತೆ ಒತ್ತಡವಿದೆ ಎಂದು ಶಾಸಕರ ಗಮನಕ್ಕೆ ತಂದರು.

ಪಾಲಿಕೆ ಆರೋಗ್ಯ ಶಾಖೆ ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಅಧಿಕಾರಿ, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜ ಬದಲಾಗದಿದ್ದರೆ ಗುಲಾಮಗಿರಿ ಬರುತ್ತೆ: ಬಿ.ವೀರಪ್ಪ
ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ನೀರಿಗಾಗಿ ಪರದಾಟ