ಕನ್ನಡಪ್ರಭ ವಾರ್ತೆ ಮೈಸೂರು
ನಾಗನಹಳ್ಳಿ ಮತ್ತು ಸಿದ್ದಲಿಂಗಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿಯಿಂದ ಶೀಘ್ರದಲ್ಲೇ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳು, ಬಡಾವಣೆಗಳಿಗೆ ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.ಚಾಮುಂಡೇಶ್ವರಿ ಕ್ಷೇತ್ರದ ಬೆಲವತ್ತ ಗ್ರಾಮದಲ್ಲಿ 1.75 ಸಾವಿರ ಲೀಟರ್ ಮತ್ತು 1.05 ಲಕ್ಷ ಸಾಮರ್ಥ್ಯದ ಎರಡು ಟ್ಯಾಂಕ್ ಗಳ ನಿರ್ವಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಮ್ಮನಹಳ್ಳಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಬೆಲವತ್ತ ಗ್ರಾಮದಲ್ಲಿ ನಿರ್ವಾಣವಾಗಲಿರುವ ಟ್ಯಾಂಕ್ ಗೆ ನೀರು ಬಂದು, ಅಲ್ಲಿಂದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದರು.ಈ ಕಾಮಗಾರಿಗೆ 30 ಕೋಟಿ ರು. ಮಂಜೂರಾಗಿದ್ದು, ಮುಂದಿನ ವರ್ಷದಲ್ಲಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು. ಸಿದ್ದಲಿಂಗಪುರ, ಕೆ.ಆರ್. ಮಿಲ್, ಬೆಲವತ್ತ, ಹಳೇ ಕೆಸರೆ, ಕಾಮನಕೆರೆಹುಂಡಿ, ನಾಗನಹಳ್ಳಿ, ಶ್ಯಾದನಹಳ್ಳಿ, ಲಕ್ಷ್ಮೀಪುರ ಹಾಗೂ ಕಳಸ್ತವಾಡಿ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದರು.
ಖಾಸಗಿ ಬಡಾವಣೆಗಳಿಗೂ ನೀರು ಹರಿಸಲು ಕ್ರಮವಹಿಸಲಾಗಿದೆ. ಅದಕ್ಕಾಗಿ ಯೋಜನೆ ರೂಪಿಸಿದ್ದು, ಮುಂದಿನ ಎಂಡಿಎ ಸಭೆಯಲ್ಲಿ ಅನುಮೋದನೆ ಸಿಗಲಿದೆ ಎಂದರು.ಬೆಲವತ್ತ ಗ್ರಾಮದಲ್ಲಿ ಈಗಾಗಲೇ 8 ಕೋಟಿ ರೂ. ಅನುದಾನದಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಬಾಕಿ ಇರುವ ಮಳೆ ನೀರು ಚರಂಡಿ ಹಾಗೂ ಒಳಚರಂಡಿ ಕಾಮಗಾರಿಯನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರು ನಗರದಿಂದ ಹಳೆ ಕೆಸರೆ ಗಾಮದ ಹತ್ತಿರ ಮಳೆ ನೀರು ಚರಂಡಿಯಲ್ಲಿ ಕೊಳಚೆ ನೀರು ಹರಿದು ಬರುತ್ತಿದ್ದು, ಈ ನೀರು ಅಕ್ಕ-ಪಕ್ಕದ ಜಮೀನಿಗೆ ಹೋಗಿ ರೈತರು ವ್ಯವಸಾಯ ವಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ರೈತರು ತಿಳಿಸಿದನ್ನು ಪರಿಗಣಿಸಿದ ಶಾಸಕರು, ಕೂಡಲೇ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿ ಮಳೆ ನೀರು ಚರಂಡಿ ಕಾಮಗಾರಿ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.ಬೆಂಗಳೂರು- ಮೈಸೂರು ರಸ್ತೆಯಲ್ಲಿ ನಿರ್ಮಿಸಿರುವ ಸ್ಕೈವಾಕ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಹಾಗೂ ಎನ್.ಎಚ್.ಎ ವತಿಯಿಂದ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ನಾಗನಹಳ್ಳಿ ದಿನೇಶ್, ಮುಖಂಡ ಮಂಜುಗೌಡ, ತಾಪಂ ಮಾಜಿ ಅಧ್ಯಕ್ಷ ಬೆಲವತ್ತ ಕುಮಾರ್, ಮಾಜಿ ಸದಸ್ಯ ರೇವಣ್ಣ, ಸಿದ್ದಲಿಂಗಪುರ ಗ್ರಾಪಂ ಅಧ್ಯಕ್ಷ ಮಾದೇಶ್, ಮಂಜು, ನಾಗನಹಳ್ಳಿ ಗ್ರಾಪಂ ಅಧ್ಯಕ್ಷೆ ರಶ್ಮಿ ಮಂಜು, ಉಪಾಧ್ಯಕ್ಷೆ ಜ್ಯೋತಿ, ಮಾಜಿ ಅಧ್ಯಕ್ಷ ಭಾಸ್ಕರ್, ಸದಸ್ಯರಾದ ಶ್ರೀನಿವಾಸ್, ರವಿಕಾಂತ್, ಪ್ರೇಮಮ್ಮ, ವಿನೋದ್ ಕುಮಾರ್, ಕಮಲಾಕ್ಷಿ, ದಶರಥ, ಗಂಗಾಧರ್, ಗುರು, ತೀರ್ಥಕುಮಾರ್, ವೆಂಕಟೇಶ್, ಶಶಿಕಲಾ, ಪ್ರಕಾಶ, ರಾಘವೇಂದ್ರ, ವಿನುತಾ ಕೆ.ಆರ್. ಮಿಲ್. ಆಶಾ, ಸುಜಾತ ಸೇರಿದಂತೆ ಹಲವರು ಇದ್ದರು.