ಚಾಮುಂಡಿಬೆಟ್ಟದಲ್ಲಿ ಅದ್ಧೂರಿ ರಥೋತ್ಸವ

KannadaprabhaNewsNetwork |  
Published : Oct 17, 2024, 01:33 AM IST
ಫೋಟೋ | Kannada Prabha

ಸಾರಾಂಶ

ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು ಸಂಪ್ರದಾಯದಂತೆ ಚಾಮುಂಡೇಶ್ವರಿದೇವಿಗೆ ಗೌರವ

ಕನ್ನಡಪ್ರಭ ವಾರ್ತೆ ಮೈಸೂರುಶರನ್ನವರಾತ್ರಿಯ ಬಳಿಕ ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿದೇವಿ ರಥೋತ್ಸವವು ಬುಧವಾರ ಸಹಸ್ರಾರು ಮಂದಿ ಭಕ್ತರ ಹರ್ಷೋದ್ಘಾರದ ನಡುವೆ ಅದ್ಧೂರಿಯಾಗಿ ನೆರವೇರಿತು.ಬುಧವಾರ ಬೆಳಗ್ಗೆ 9.30ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡೇಶ್ವರಿದೇವಿಯ ರಥೋತ್ಸವದಲ್ಲಿ ಶಾಸಕ ಜಿ.ಟಿ. ದೇವೇಗೌಡರು ಕುಟುಂಬ ಸಮೇತ ಪಾಲ್ಗೊಂಡಿದ್ದರು. ಆದರೆ ಸೂತಕದ ಹಿನ್ನೆಲೆಯಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿಲ್ಲವಾದರೂ, ಅವರ ಹೆಸರಿನಲ್ಲಿ ಅರ್ಚನೆ ಮಾಡಲಾಯಿತು. ಜ್ಯೋತಿಷಿ ಆನಂದ ಗುರೂಜಿ ಇದ್ದರು.ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು ಸಂಪ್ರದಾಯದಂತೆ ಚಾಮುಂಡೇಶ್ವರಿದೇವಿಗೆ ಗೌರವ ಸಲ್ಲಿಸಿದರು. ಚಾಮುಂಡೇಶ್ವರಿಯ ತೇರು ದೇವಸ್ಥಾನವನ್ನು ಒಂದು ಸುತ್ತು ಹಾಕಿತು. ಸಾವಿರಾರು ಭಕ್ತರು ದೇವಸ್ಥಾನದ ಸುತ್ತ ನೆರೆದು ರಥಕ್ಕೆ ಹಣ್ಣು ದವನ ಎಸೆದು ಜೈಕಾರ ಮೊಳಗಿಸಿದರು.ಸಾವಿರಾರು ಸಂಖ್ಯೆಯ ಭಕ್ತರು ರಥ ಎಳೆಯಲು ಮುಗಿಬಿದ್ದರು. ಬಳಿಕ ಚಾಮುಂಡೇಶ್ವರಿಯ ಮೂಲ ಮೂರ್ತಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಯಿತು. ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಥೋತ್ಸವಕ್ಕೆ ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು ಮೆರುಗು ನೀಡಿದವು.ಸಂಜೆ ಮಂಟಪೋತ್ಸವ, ಸಿಂಹವಾಹನೋತ್ಸವ ಹಾಗೂ ಹಂಸವಾಹನೋತ್ಸವವೂ ನೆರವೇರಿತು.ರಥೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದಲೇ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆ ನೆರವೇರಿತು. ಅ. 18ಕ್ಕೆ ತೆಪ್ಪೋತ್ಸವ ಜರುಗಲಿದ್ದು, ಅದರೊಂದಿಗೆ ಈ ಬಾರಿಯ ಶರನ್ನವರಾತ್ರಿಯ ಪೂಜೆ ಸಮಾಪ್ತಿಗೊಳ್ಳಲಿದೆ.ಬೆಟ್ಟಕ್ಕೆ ಬೆಳಗ್ಗೆಯಿಂದಲೇ ಭಕ್ತರು ಗುಂಪು ಗುಂಪಾಗಿ ಬಂದು ಸೇರಿದ್ದರು. ಅದ್ಧೂರಿಯಾಗಿ ನಡೆದ ರಥೋತ್ಸವ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಬೆಟ್ಟದ ಸುತ್ತಲಿನ ಗ್ರಾಮಗಳಾದ ಆಲನಹಳ್ಳಿ, ಲಲಿತಾದ್ರಿಪುರ, ಉತ್ತನಹಳ್ಳಿ, ಹೊಸಹುಂಡಿ, ಬಂಡಿಪಾಳ್ಯ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ದೇವಾಲಯದಲ್ಲಿ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ನೂಕುನುಗ್ಗಲು ಉಂಟಾಯಿತು. ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಈ ನಡುವೆಯೇ ಭಕ್ತರು ಬೆಳಗಿನ ಪೂಜೆಯಲ್ಲಿ ಭಾಗವಹಿಸಿ, ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಹರಕೆ ಹೊತ್ತ ಭಕ್ತರು ಸಾವಿರ ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದರು.--- ಕೋಟ್ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅದರೊಂದಿಗೆ ರುದ್ರಾಭಿಷೇಕ ನೆರೆವೇರಿತು. ಈ ಬಾರಿ ಸಂಪ್ರದಾಯದಂತೆ ದೇವಿಯನ್ನು ಶೃಂಗಾರಗೊಳಿಸಿ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಗಿದ್ದು, ನಾಡಿಗೆ ಉತ್ತಮ ಮಳೆ ಬೆಳೆಯಾಗಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಲಾಗಿದೆ.-ಶಶಿಶೇಖರ್ ದೀಕ್ಷಿತ್, ಪ್ರಧಾನ ಅರ್ಚಕರು.---ಬಾಕ್ಸ್ ರಾಜಕೀಯ ಮಾತನಾಡಲ್ಲ- ಜಿಟಿಡಿದಸರಾ ಮಹೋತ್ಸವದ ವೇಳೆ ವೇದಿಕೆಯಲ್ಲಿ ಮುಡಾ ಹಗರಣದ ಬಗ್ಗೆ ಮಾತನಾಡಿ ಟೀಕೆ ಎದುರಿಸಿದ್ದ ಶಾಸಕ ಜಿ.ಟಿ. ದೇವೇಗೌಡ ಇಂದು ರಾಜಕೀಯ ಮಾತನಾಡುವುದಿಲ್ಲ ಎಂದರು.ಮುಡಾ ಅಧ್ಯಕ್ಷರ ರಾಜೀನಾಮೆ ಹಾಗೂ ಚನ್ನಪಟ್ಟಣ ಉಪ ಚುನಾವಣೆ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ದಸರಾ ವೇಳೆ ವೇದಿಕೆಯಲ್ಲಿ ಮಾತನಾಡಿದ್ದು ಅಪವಿತ್ರ ಎಂದರು.ಇದನ್ನೇ ಹೇಳಿ ಸಾಕಷ್ಟು ಜನ ನನಗೆ ಬುದ್ದಿ ಹೇಳಿದ್ದಾರೆ. ದೇವೇಗೌಡ ಚಾಮುಂಡಿ ಸನ್ನಿಧಿಯನ್ನು ಅಪವಿತ್ರ ಮಾಡಿಬಿಟ್ಟರು ಅಂತೆಲ್ಲಾ ಮಾತನಾಡಿದ್ದಾರೆ. ಅದಕ್ಕಾಗಿ ನಾನು ಇಲ್ಲಿ ಯಾವುದೇ ರಾಜಕಾರಣ ಮಾತನಾಡೋದಿಲ್ಲ. ನಾಡಿನ ಜನರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದಷ್ಟೇ ಹೇಳಿದರು.--ಮತ್ತೊಂದು ಬಾಕ್ಸ್...-- ಉತ್ತನಹಳ್ಳಿ ಬಳಿ ಗೇಟ್ ಬಂದ್- ಭಕ್ತಾದಿಗಳ ಆಕ್ರೋಶಚಾಮುಂಡಿಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಅದೇ ರೀತಿ ವಾಯುವಿಹಾರಿಗಳು ಮೆಟ್ಟಿಲುಗಳ ಮೂಲಕ, ಉತ್ತನಹಳ್ಳಿ ದೇವಸ್ಥಾನ, ಮುಖ್ಯ ರಸ್ತೆಯ ಮೂಲಕವು ತೆರಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಟ್ಟಕ್ಕೆ ಯಾರಾದರೂ ವಿಐಪಿಗಳು ಬಂದರೆ ಅಥವಾ ಯಾವುದಾದರೂ ಉತ್ಸವ ಇದ್ದರೆ ಗೇಟುಗಳನ್ನು ಬಂದ್ ಮಾಡಿ ತೊಂದರೆ ನೀಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಥೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಬೆಟ್ಟಕ್ಕೆ ತೆರಳುತ್ತಿದ್ದವರಿಗೂ ಪೊಲೀಸರು ಈ ರೀತಿ ಉತ್ತನಹಳ್ಳಿ ದೇವಸ್ಥಾನದ ಬಳಿ ಗೇಟ್ ಬಂದ್ ಮಾಡಿ ಕಿರಿಕಿರಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಸಿಬ್ಬಂದಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆಯ

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್