ಶಾಸಕ ಗಣೇಶ್‌ ಪ್ರಸಾದ್‌ಗೆ ಅಧಿಕಾರ ದಾಹ

KannadaprabhaNewsNetwork |  
Published : Jun 21, 2025, 12:49 AM IST
20ಜಿಪಿಟಿ2ಗುಂಡ್ಲುಪೇಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಪತ್ರಕರ್ತರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಗುಂಡ್ಲುಪೇಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಪತ್ರಕರ್ತರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರಿಗೆ ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲದ ಕಾರಣ ತಾವೇ ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಸ್ಪರ್ಧಿಸಿದ್ದಾರೆಂದರೆ ಗಣೇಶ್‌ ಕುಟುಂಬಕ್ಕೆ ಅಧಿಕಾರದ ದಾಹ ಬಹಿರಂಗಗೊಂಡಿದೆ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಸ್.ಎಂ.ವೀರಪ್ಪರನ್ನು ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರ ಸ್ಪರ್ಧೆ ಆಶ್ಚರ್ಯ ತರಿಸಿದೆ ಎಂದು ವಾಗ್ದಾಳಿ ನಡೆಸಿದರು. ಶಾಸಕರಾಗಿ ಗಣೇಶ್‌ ಪ್ರಸಾದ್‌, ಅವರ ಚಿಕ್ಕಪ್ಪ ಚಾಮುಲ್‌ ನಿರ್ದೇಶಕ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ, ಹಾಲಹಳ್ಳಿ ಡೇರಿ ಮತ್ತು ಫ್ಯಾಕ್ಸ್‌ ಅಧ್ಯಕ್ಷರಾಗಿದ್ದಾರೆ ಆದರೀಗ ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಶಾಸಕರೇ ಸ್ಪರ್ಧಿಸಿದ್ದಾರೆಂದರೆ ಇವರ ಕುಟುಂಬಕ್ಕೆ ಅಧಿಕಾರ ದಾಹ ಎಷ್ಟಿದೆ ನೋಡಿ ಎಂದರು.

ಮಹದೇವಪ್ರಸಾದ್‌ ಅವಧಿಯಲ್ಲಿ ಎಚ್.ಎಸ್.ನಂಜುಂಡಪ್ರಸಾದ್‌ರಿಗೆ ಅಧಿಕಾರ ಕೊಟ್ಟಿರಲಿಲ್ಲ. ಗಣೇಶ್‌ ಪ್ರಸಾದ್‌ ರಾಜಕಾರಣಕ್ಕೆ ಬಂದ ಬಳಿಕ ನಂಜುಂಡಪ್ರಸಾದ್‌ ಸಹಕಾರ ಕ್ಷೇತ್ರಕ್ಕೆ ಧುಮುಕಿದರು. ಇದೀಗ ಗಣೇಶ್‌ ಪ್ರಸಾದ್‌ರ ಗೆಲುವಿಗೆ ದುಡಿದ ಕಾರ್ಯಕರ್ತರಿಗೆ ಎಂಸಿಡಿಸಿಸಿ ಸ್ಥಾನ ಬಿಟ್ಟು ಕೊಟ್ಟಿಲ್ಲ. ಇದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಆದ ದ್ರೋಹ, ಮೋಸವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. ಜನ ಶಾಸಕರ ಫ್ಯಾಮಿಲಿ ಕಂಪನಿ ಅನುಭವಿಸುತ್ತಿರುವ ಅಧಿಕಾರ ಗಮನಿಸುತ್ತಿದ್ದಾರೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಗಣೇಶ್ ಕುಟುಂಬದವರೊಬ್ಬರು ತಯಾರಿ ನಡೆಸಿದ್ದಾರೆ. ಗಣೇಶ್‌ ಪ್ರಸಾದ್‌ರ ನಡವಳಿಕೆ ನೋಡಿದರೆ ಫ್ಯಾಮೀಲಿ ಕಂಪನಿ ರನ್‌ ಮಾಡಲು ಹೊರಟಿದ್ದಾರೆ ಎಂದು ಗೇಲಿ ಮಾಡಿದರು.

ಶಾಸಕರಾಗಿ ಇರೋ ಕೆಲಸವನ್ನೇ ಸರಿಯಾಗಿ ಮಾಡಲು ಆಗುತ್ತಿಲ್ಲ. ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆಗೋಗಿ ರೈತರಿಗೆ ಸಾಲ ಕೊಡಿಸ್ತಾರಾ? ಶಾಸಕರಾಗಿ ಗಮನ ಕೊಡದೇ, ಜನರ ಮುಂದೆ ನೀವು ಅಸಾಯಕರಾಗಿ ಮಾತನಾಡುತ್ತಿರುವುದೂ ಜನತೆಗೆ ಗೊತ್ತಿದೆ ಎಂದರು. ಶಾಸಕರು ತಮ್ಮ ಹಿತಾಶಕ್ತಿಗೆ ಕಾರ್ಯಕರ್ತರಿಗೆ ಎಂಸಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಅವಕಾಶ ನೀಡಿಲ್ಲ. ಈ ಬಗ್ಗೆ ಡಿಲಿಗೇಟ್ಸ್‌ ಗಳು ಯೋಚಿಸಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಎಲ್.ಸುರೇಶ್‌, ಚಾಮುಲ್‌ ಮಾಜಿ ನಿರ್ದೇಶಕ ಕನ್ನೇಗಾಲಸ್ವಾಮಿ, ತಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಬಿಜೆಪಿ ಮುಖಂಡರಾದ ಡಾ.ನವೀನ್‌ ಮೌರ್ಯ, ಅಶ್ವಿನ್‌ ಜಿ ರಾಜನ್‌, ಮಾಡ್ರಹಳ್ಳಿ ನಾಗೇಂದ್ರ, ಗೋವಿಂದರಾಜು ಇದ್ದರು.

ಶಾಸಕರು ವಿವೇಕದಿಂದ ವರ್ತಿಸಬೇಕಿತ್ತು

ಪಟ್ಟಣದಲ್ಲಿ ಯುವಕನೊಬ್ಬ ಕೊಲೆಯಾಗಿದ್ದಾನೆ. ನಾಗರಿಕರು ಪ್ರತಿಭಟಿಸಿದರೆ ಶಾಸಕರು ವಿವೇಕದಿಂದ ಪ್ರತಿಭಟನಾಕಾರರೊಂದಿಗೆ ವರ್ತಿಸಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಆರೋಪಿಸಿದರು. ಪತ್ರಕರ್ತರೊಂದಿಗೆ ಮಾತನಾಡಿ, ಯುವಕನ ಕೊಲೆಯಾಗಿದೆ, ಈ ಕೊಲೆ ಒಬ್ಬರು, ಇಬ್ಬರಿಂದ ಸಾಧ್ಯವಿಲ್ಲ. ಉಳಿದ ಆರೋಪಿಗಳ ಬಂಧನವಾಗಬೇಕು ಎಂದು ಪಟ್ಟಣದ ನಾಗರಿಕರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟಿಸಿದರೆ ಶಾಸಕರಾಗಿ ಗಣೇಶ್‌ ಪ್ರಸಾದ್‌ ಒಳ್ಳೆ ಮಾತು ಆಡಲಿಲ್ಲ. ಬದಲಾಗಿ ಬಿಜೆಪಿಗರು ಪ್ರತಿಭಟಿಸುತ್ತಿದ್ದಾರೆ ಎಂದು ಮಾತನಾಡಿದ್ದಾರೆ ಇದು ಖಂಡನೀಯ ಎಂದರು. ಬಡತನದ ಯುವಕ ಸಾವಾಗಿದ್ದಾನೆ. ಅದು ಗಾಂಜಾ ಮತ್ತು ಡ್ರಗ್ಸ್‌ ನಿಂದ ಹಾಗಾಗಿ ಪೊಲೀಸರು ಗಾಂಜಾ ಮತ್ತು ಡ್ರಗ್ಸ್‌ ಹಾವಳಿ ತಡೆಗೆ ಮುಂದಾಗಬೇಕು, ಈ ವಿಷಯದಲ್ಲಿ ಆಡಳಿತ ವೈಫಲ್ಯವಾಗಿದೆ. ಯುವಕನ ಕುಟುಂಬಕ್ಕೆ ಪರಿಹಾರ ಹಾಗೂ ನೌಕರಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಚುನಾವಣೆಗೂ ಮುನ್ನವೇ ಸೋಲು

ಒಪ್ಪಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷ

ನಾನು ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆ ಸ್ಪರ್ಧಿಸಿದ್ದೇನೆ, ಮತದಾನಕ್ಕೂ ಮುಂಚೆಯೇ ಬಿಜೆಪಿ ಸೋಲೊಪ್ಪಿಕೊಂಡಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ, ಚುನಾವಣೆಗೆ ಇನ್ನೂ ಆರು ದಿನಗಳ ಬಾಕಿಯಿದೆ. ಚುನಾವಣೆಗೂ ಮುನ್ನವೇ ಬಿಜೆಪಿ ಜಿಲ್ಲಾಧ್ಯಕ್ಷರು ಸೋಲು ಒಪ್ಪಿಕೊಂಡಂತಾಗಿದೆ ಎಂದು ಲೇವಡಿ ಮಾಡಿದರು. ನಾನು ಚುನಾವಣೆಗೆ ನಿಲ್ಲಲು ಇಷ್ಟವಿರಲಿಲ್ಲ. ಸಿಎಂ ಸೂಚನೆ ಹಾಗೂ ಡೆಲಿಗೇಟ್ಸ್‌ ಗಳ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೇನೆ ರಾಜಕೀಯ ಕಾರಣಕ್ಕಾಗಿ ಮಾಜಿ ಶಾಸಕರು ಮಾತನಾಡಿದ್ದಾರೆ ಅಷ್ಟೆ ಎಂದರು.‌

ಪೊಲೀಸರ ಕೆಲಸ: ಪಟ್ಟಣದಲ್ಲಿ ಗಾಂಜಾ, ಡ್ರಗ್ಸ್‌ ವಾಸನೆ ಇದ್ದರೆ ಸ್ಥಳೀಯ ಪೊಲೀಸರು ಅವರ ಕೆಲಸ ಮಾಡಲಿದ್ದಾರೆ. ಯುವಕನ ಸಾವಿನ ಪ್ರಕರಣದ ಬಗ್ಗೆ ಬೆಳಗ್ಗೆಯಿಂದ ಸಂಜೆ ತನಕ ಎಲ್ಲಾ ಮಾಹಿತಿ ಪಡೆದಿದ್ದೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ