ಕನ್ನಡಪ್ರಭ ವಾರ್ತೆ ಬೈಂದೂರು
ನಿರಂತರ ಗಾಳಿ ಮಳೆಯಿಂದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಕೃತಿಕ ಅನಾಹುತ ಉಂಟಾಗಿರುವ ಸ್ಥಳಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ತುರ್ತು ಪರಿಹಾರ ಹಾಗೂ ಮೂಲಸೌಕರ್ಯದ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.* ಕೊಡೇರಿಗೆ ಭೇಟಿ: ಆಕಸ್ಮಿಕವಾಗಿ ಬೆಂಕಿ ಬಿದ್ದು ಹಾನಿಗೀಡಾದ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯ ದಿನಸಿ ಅಂಗಡಿಗೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು. ಹಾಗೆಯೇ ಮಳೆಗಾಲದಲ್ಲಿ ವಿದ್ಯುತ್ ಸಹಿತ ವಿವಿಧ ವಸ್ತುಗಳ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎಂಬ ಸಲಹೆ ನೀಡಿದರು.* ಕಡಲ್ಕೊರೆತ ವೀಕ್ಷಣೆ: ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಕಡಲು ತೀರದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳೀಯ ಕಾರ್ಯಕರ್ತರು ಹಾಗೂ ಪಂಚಾಯತ್ ಸದಸ್ಯರು ಜತೆಗಿದ್ದು ಮಾಹಿತಿ ನೀಡಿ, ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದರು.* ಕೊಡೇರಿ ಬಂದರಿಗೆ ಭೇಟಿ: ಕೊಡೇರಿ ಕಿರುಬಂದರು ಬ್ರೇಕ್ ವಾಟರ್ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ತಕ್ಷಣವೇ ತುರ್ತು ಪರಿಹಾರ ಹಾಗೂ ಕಾಮಗಾರಿಗೆ ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.* ಮಡಿಕಲ್ ಶಾಲೆಗೆ ಭೇಟಿ: ಉಪ್ಪುಂದ ಮಾಡಿಕಲ್ ಶಾಲೆ ಕಟ್ಟಡ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಶಿಕ್ಷಕರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಯಿತು.* ತಾರಪತಿ ಕಡಲ್ಕೊರೆತ ವೀಕ್ಷಣೆ: ತಾರಪತಿ ಭಾಗದಲ್ಲಿ ಉಂಟಾಗಿರುವ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.* ಗುಜ್ಜಾಡಿಗೆ ಭೇಟಿ: ಭಾರಿ ಗಾಳಿ ಮಳೆಗೆ ಗುಜ್ಜಾಡಿ ಗ್ರಾಮದ ಉದಯ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಾಯಿತು.