ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಜನರು ಅರಣ್ಯ ಹಕ್ಕುಗಳ ಮಂಜೂರಾತಿ ಪಟ್ಟಿ ಪಡೆಯುವಲ್ಲಿ ಎದುರಿಸುತ್ತಿರುವ ತೊಂದರೆ ಕುರಿತು ಶಾಸಕ ಶಿವರಾಮ ಹೆಬ್ಬಾರ್ ಅವರು ಗುರುವಾರ ಸದನದ ಗಮನ ಸೆಳೆದರು.
೨೦೦೬ರಲ್ಲಿ ಮನಮೋಹನ ಸಿಂಗ್ ಅವರ ಅಧಿಕಾರದಲ್ಲಿ ಬುಡಕಟ್ಟು ಇಲಾಖೆಯಿಂದ ಅರಣ್ಯ ಅತಿಕ್ರಮಣದಾರರಿಗೆ ಅತಿಕ್ರಮಣ ಭೂಮಿ ಮಂಜೂರಿ ಮಾಡುವಂತೆ ಕಾನೂನು ತರಲಾಯಿತು. ೨೦೦೬ರಿಂದ ಈ ವರೆಗೆ ಲಕ್ಷಾಂತರ ಜನ ಭೂಮಿ ಮಂಜೂರಿಗಾಗಿ ಕಾಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೮೮,೪೫೩ ಅತಿಕ್ರಮಣದಾರರು ಅರ್ಜಿ ಹಾಕಿದ್ದು, ೭೩,೮೫೯ (ಶೇ. ೮೩.೫೦) ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ಎಲ್ಲ ಅರ್ಜಿಗಳನ್ನು ತಿರಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಎತ್ತಿ ಹೇಳಿದರು.
ಅರಣ್ಯ ಸಚಿವರು ಉನ್ನತ ಮಟ್ಟದ ಸಭೆ ಕರೆದು ಸೂಕ್ತ ನಿರ್ಣಯ ಮಾಡದೇ ಹೋದರೆ ಈ ತೊಂದರೆ ಸದಾ ಮುಂದುವರಿಯುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೇ ಹೋದರೆ ಉತ್ತರ ಕನ್ನಡದ ಒಂದು ಲಕ್ಷಕ್ಕೂ ಹೆಚ್ಚು ಕುಟುಂಬ ಅನಾಥವಾಗುವ ಪರಿಸ್ಥಿತಿ ಬರುತ್ತದೆ. ಆ ನಿಟ್ಟಿನಲ್ಲಿ ನಾಲ್ಕೈದು ಸಭೆಗಳು, ಸಾವಿರಾರು ಹೋರಾಟಗಳು ನಡೆದಿವೆ. ಆದರೆ ಇದುವರೆಗೂ ಪರಿಹಾರ ದೊರೆತಿಲ್ಲ. ಅರ್ಜಿ ತಿರಸ್ಕಾರ ಮಾಡಿರುವುದು ಜನರಿಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಮಸ್ಯೆ ಇರುವುದು ಅರಣ್ಯ ಇಲಾಖೆಯಲ್ಲಿ, ಹಾಗೆಯೇ ಇದನ್ನು ಮಂಜೂರಿ ಮಾಡುವ ನೋಡಲ್ ಏಜೆನ್ಸಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರದ್ದು. ಈ ಎರಡೂ ಮಂತ್ರಿಗಳೂ ಸೇರಿ ಅರಣ್ಯ ಇಲಾಖೆಯ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇನೆ ಎಂದರು.