ಕನ್ನಡಪ್ರಭ ವಾರ್ತೆ ಬೇಲೂರು
ಬಿಜೆಪಿಯ 18 ಶಾಸಕರನ್ನು ಸದನದಿಂದ ಆರು ತಿಂಗಳ ಕಾಲ ಅಮಾನತುಗೊಳಿಸಿರುವುದು ಹಾಗೂ ಬೆಲೆ ಏರಿಕೆ ಖಂಡಿಸಿ ಪಟ್ಟಣದ ನೆಹರೂ ನಗರ ವೃತ್ತದ ಬಳಿ ಶನಿವಾರ ಬಿಜೆಪಿ ವತಿಯಿಂದ ಶಾಸಕ ಎಚ್. ಕೆ. ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಶಾಸಕ ಎಚ್. ಕೆ. ಸುರೇಶ್ ಮಾತನಾಡಿ, ಬಿಜೆಪಿಯ 18 ಶಾಸಕರ ಅಮಾನತು ಕ್ರಮ ಸಂವಿಧಾನ ಬಾಹಿರವಾಗಿದೆ. ಜನಪ್ರತಿನಿಧಿಯನ್ನು 6 ತಿಂಗಳ ಕಾಲ ಅಮಾನತುಗೊಳಿಸಿ, ವಿಧಾನಸೌಧದ ಮೊಗಸಾಲೆಗೂ ಬರಬಾರದೆಂದು ಆದೇಶ ಮಾಡಿದ್ದಾರೆ. ಸ್ಪೀಕರ್ ಅವರು ಖಂಡಿತವಾಗಿ ಆಡಳಿತ ಪಕ್ಷದ ಕೈಗೊಂಬೆಯಾಗಿ ಹಾಗೂ ಮುಖ್ಯಮಂತ್ರಿಗಳನ್ನು ತೃಪ್ತಿಪಡಿಸಲು ಸಂವಿಧಾನಕ್ಕೆ ವಿರುದ್ಧವಾಗಿ ಆದೇಶ ಮಾಡಿದ್ದಾರೆ.
ಅಮಾನತು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಸ್ಪೀಕರ್ ಮೌನಕ್ಕೆ ಜಾರಿದ್ದಾರೆ. ತಮ್ಮ ನಿರ್ಣಯ ಸಂವಿಧಾನ ವಿರೋಧಿ ಎಂಬುದು ಸ್ಪೀಕರ್ ಅವರಿಗೂ ಅರ್ಥವಾಗಿದೆ. ಆದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಅವರು ಭಂಡತನ ಪ್ರದರ್ಶಿಸುತ್ತಿದ್ದಾರೆ, 18 ಶಾಸಕರ ಅಮಾನತು ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯದಿದ್ದರೆ ಕಾಂಗ್ರೆಸ್ ಪಕ್ಷದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಕಿಡಿಕಾರಿದರು.ಕಾಂಗ್ರೆಸ್ ನ ದರ ಏರಿಕೆ ಕ್ರಮದಿಂದ ಬಡವರಿಗೆ ಬಿಸಿ ಮುಟ್ಟಿದ್ದು ಜೀವನ ನಡೆಸಲು ಕಷ್ಟವಾಗಿದೆ. ಶೇ. ೪ರಷ್ಟು ಮುಸ್ಲಿಮರಿಗೆ ಕೊಟ್ಟಿರುವ ಮೀಸಲಾತಿ ರದ್ದು ಮಾಡಿ ಡಾ. ಬಿ. ಆರ್. ಅಂಬೇಡ್ಕರ್ ರ ಸಂವಿಧಾನದ ಪ್ರಕಾರ ನಡೆಯಬೇಕು. ಸರ್ಕಾರ. ಡೀಸೆಲ್ ಬೆಲೆ, ಹಾಲಿನ ದರ ಹೆಚ್ಚಳ ಮಾಡಿ ರೈತರ ಹಾಗೂ ಸಾರ್ವಜನಿಕರ ಮೇಲೆ ಹೊರೆ ಹೊರಿಸುವ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜು ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ. ಅದೇ ರೀತಿ ಗ್ಯಾರಂಟಿ ಯೋಜನೆಯಿಂದ ತೆಲಂಗಾಣದಲ್ಲೂ ಸರ್ಕಾರ ದಿವಾಳಿಯಾಗಿದೆ. ಅಂಬೇಡ್ಕರ್ ಕೊಟ್ಟಂಥ ಶ್ರೇಷ್ಠ ಸಂವಿಧಾನ ತಿರುಚಿ ಏಕ ಚಕ್ರಾಧಿಪತ್ಯದ ಅಧಿಕಾರ ಮಾಡುತ್ತಿದೆ. ಕಾಂಗ್ರೆಸ್ ನ ವರಸೆ ಹೀಗೆ ಮುಂದುವರಿದರೆ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಧಾನ ಕಾರ್ಯದರ್ಶಿ ನವೀನ್ ರಮೇಶ್ ಬಂಡೆ, ರಮೇಶ್ , ಸಿಎಸ್ ಪ್ರಕಾಶ್, ಪರ್ವತಯ್ಯ, ಹಿಂದುಳಿದ ವರ್ಗದ ಕಾರ್ಯದರ್ಶಿ ಕುಮಾರಸ್ವಾಮಿ. ಮಾಜಿ ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಶೋಭ ಗಣೇಶ್ ಇತರರು ಹಾಜರಿದ್ದರು.