ಶಾಸಕನಿಗೆ ಏಡ್ಸ್‌ ಹಬ್ಬಿಸಲೆತ್ನ: ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಆಪ್ತ ಇನ್ಸ್ಪೆಕ್ಟರ್‌ ಸೆರೆ

KannadaprabhaNewsNetwork |  
Published : Nov 15, 2024, 12:33 AM ISTUpdated : Nov 15, 2024, 09:32 AM IST
MLA BJp producer Munirathna

ಸಾರಾಂಶ

ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಅಯ್ಯಣ್ಣ ರೆಡ್ಡಿ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

 ಬೆಂಗಳೂರು : ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಅಯ್ಯಣ್ಣ ರೆಡ್ಡಿ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಅಪರಾಧಿಕ ಸಂಚಿನಲ್ಲಿ ಪಾತ್ರವಹಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮೂಲದ ರಾಜ್ಯದ ಬಿಜೆಪಿ ಪ್ರಭಾವಿ ಮುಖಂಡ ಹಾಗೂ ಹಿರಿಯ ಶಾಸಕನಿಗೆ ಏಡ್ಸ್‌ ಸೋಂಕು ಹಬ್ಬಿಸಲು ಚುಚ್ಚು ಮದ್ದು ನೀಡುವ ಸಂಚನ್ನು ಆರೋಪಿಗಳು ರೂಪಿಸಿದ್ದರು. ಈ ಸಂಚಿನಲ್ಲಿ ಇನ್‌ಸ್ಪೆಕ್ಟರ್‌ ಅಯ್ಯಣ್ಣ ಪ್ರಮುಖ ಪಾತ್ರವಹಿಸಿದ್ದ ಸಂಗತಿ ಗೊತ್ತಾಯಿತು. ಹಾಗೆಯೇ ವಿಚಾರಣೆ ವೇಳೆ ದೂರುದಾರರು ಹಾಗೂ ಕೆಲ ಸಾಕ್ಷಿದಾರರು ಕೂಡ ಅಯ್ಯಣ್ಣ ಕುರಿತು ಮಾಹಿತಿ ನೀಡಿದ್ದರು. ಅಂತೆಯೇ ಐಪಿಸಿ 120ಬಿ (ಅಪರಾಧಿ ಸಂಚು) ಆರೋಪದಡಿ ಐಯ್ಯಣ್ಣರವನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನಿರತ್ನ ಆಪ್ತ ರೆಡ್ಡಿ:

ಶಾಸಕ ಮುನಿರತ್ನ ಅವರ ಆಪ್ತ ವಲಯದಲ್ಲಿ ಇನ್‌ಸ್ಪೆಕ್ಟರ್ ಅಯ್ಯಣ್ಣ ಗುರುತಿಸಿಕೊಂಡಿದ್ದರು. ಹೀಗಾಗಿಯೇ ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ, ರಾಜಗೋಪಾಲ ನಗರ ಹಾಗೂ ಪೀಣ್ಯ ಠಾಣೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮುನಿರತ್ನ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೋಲಾರ ಗ್ರಾಮಾಂತರ ವೃತ್ತ ಪಿಐಗೆ ಅಯ್ಯಣ್ಣ ಕೆಲಸ ಮಾಡಿದ್ದರು. ಹಾಗೆಯೇ ಮುನಿರತ್ನ ಶಿಫಾರಸಿನ ಮೇರೆಗೆ ಕಬ್ಬನ್ ಪಾರ್ಕ್‌ ಠಾಣೆಯಲ್ಲಿ ಆಡಳಿತ ನಡೆಸಿದ್ದ ಅವರು, ಪ್ರಸುತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ದೂರುದಾರರು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಯ್ಯಣ್ಣ ರೆಡ್ಡಿ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಖುದ್ದು ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್‌ ಲಿಖಿತ ದೂರು ಕೂಡ ಸಲ್ಲಿಸಿದ್ದರು. ಅಲ್ಲದೆ ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್‌.ಸುರೇಶ್‌ರವರ ಅಳಿಯ ಹಾಗೂ ಐಎಎಸ್ ಅಧಿಕಾರಿ ಅಕಾಶ್‌ರವರ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ಅನ್ನು ಅಕ್ರಮವಾಗಿ ಪಡೆದ ಆರೋಪ ಮೇರೆಗೆ ಐಯ್ಯಣ್ಣ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿತ್ತು. ಹೀಗೆ ವಿವಾದಗಳಿಂದ ಅಯ್ಯಣ್ಣ ರೆಡ್ಡಿ ಸುದ್ದಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?