ಚನ್ನಪಟ್ಟಣ: ಚನ್ನಪಟ್ಟಣದ ಅಲ್ಪಸಂಖ್ಯಾತರು ವಾಸಿಸುವ ವಿವಿಧ ವಾರ್ಡ್‌ಗಳಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಮುಖಂಡರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು.
ಬೇರುಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಯಾವ ರೀತಿ ಪಕ್ಷಕ್ಕೆ ಮತಗಳನ್ನು ಪಡೆಯಬೇಕು ಎಂಬ ನಿಟ್ಟಿನಲ್ಲಿ ಕಾರ್ಯತಂತ್ರ ನಡೆಸಲಾಗಿದೆ. ಇಲ್ಲಿ ಆಯ್ಕೆಯಾಗಿರುವ ನಗರಸಭಾ ಸದಸ್ಯರು ಯುವಕರಾಗಿದ್ದು, ಅವರಲ್ಲಿ ಉತ್ಸಾಹವಿದೆ. ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂಬ ಹಂಬಲ ಅವರಲ್ಲಿ ಇದೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಈ ಹಿಂದೆ ಮುಸ್ಲಿಂ ಸಮುದಾಯ ಜೆಡಿಎಸ್‌ಗೂ ಬೆಂಬಲಿಸಿದ್ದರು. ಆದರೆ, ಅವರಿಗೆ ಚುನಾವಣೆ, ಮತ ಹೊರತುಪಡಿಸಿ ಏನು ಗೊತ್ತಿಲ್ಲ. ಜನರ ಕಷ್ಟಸುಖ, ಅಭಿವೃದ್ಧಿ ಕುರಿತು ಅವರಿಗೆ ಚಿಂತನೆ ಇಲ್ಲ. ಜನ ಅವರಿಂದ ದೂರಾಗಿದ್ದಾರೆ. ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾದವರು ಅಭಿವೃದ್ಧಿ ಬಗ್ಗೆ ಆಸಕ್ತಿ ವಹಿಸಲಿಲ್ಲ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅವರು ಚುನಾವಣೆ ಮತ್ತು ಅಧಿಕಾರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂಬುದಕ್ಕೆ ಪಟ್ಟಣದಲ್ಲಿನ ಮೂಲಭೂತ ಸಮಸ್ಯೆಗಳೇ ಸಾಕ್ಷಿಯಾಗಿವೆ. ಇವುಗಳನ್ನು ಕಂಡಿರುವ ಮತದಾರರು ಚುನಾವಣೆಯಲ್ಲಿ ಅವರಿಗೆ ಬುದ್ದಿ ಕಲಿಸುವ ಕೆಲಸ ಮಾಡಲಿದ್ದಾರೆ ಎಂದರು.
ಅವರ ಕುಟಂಬಕ್ಕೆ ನೀಡಿದಷ್ಟು ಅಧಿಕಾರವನ್ನು ಜನ ಯಾರಿಗೂ ನೀಡಿಲ್ಲ. ಪ್ರಧಾನಿ, ಮುಖ್ಯಮಂತ್ರಿ ಮಾಡಿದ್ದಾರೆ. ನಾವೆ ನಿಂತು ಹಿಂದೆ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದೇವೆ. ಆದರೆ, ಅವರು ಮಾಡಿದ ಅಭಿವೃದ್ಧಿಯಾದರೂ ಏನು ಎಂದು ಪ್ರಶ್ನಿಸಿದರು.ಚುನಾವಣೆ ಮುಗಿಯುವವರೆಗೆ ನಾನು ಇಲ್ಲೆ ಇರುತ್ತೇನೆ. ನಾವು ಈ ಜಿಲ್ಲೆಯವರೇ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಕ್ಷೇತ್ರದ ಅಭಿವೃದ್ದಿ, ಬಡವರಿಗೆ ನಿವೇಶನ ಸೇರಿದಂತೆ ಮೂಲಭೂತ ಸೌಕರ್ಯಗಳ ಅನುಷ್ಠಾನಕ್ಕಾಗಿ ಕ್ಷೇತ್ರದ ಮನೆ ಮಗ ಸಿ.ಪಿ.ಯೋಗೇಶ್ವರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ತೀರ್ಮಾನವನ್ನು ಮತದಾರರು ಮಾಡಿದ್ದಾರೆ ಎಂದು ಹೇಳಿದರು.
ಪ್ರಚಾರ ಸಮಯದಲ್ಲಿ ನಗರಸಭೆ ಸದಸ್ಯ ಮತೀನ್ ಖಾನ್, ಮುಖಂಡರಾದ ಅತೀಕ್ ಮುನೋಹರ್, ಅಕ್ಬರ್, ನಿಜಾಂ ಮಹಮದ್ ಷರೀಪ್, ಖಾನ್, ವಸೀಂ ಸೇರಿದಂತೆ ಅನೇಕ ಅಲ್ಪಸಂಖ್ಯಾತ ಮುಖಂಡರು ಜೊತೆಯಲ್ಲಿದ್ದರು.ಪೊಟೋ೨೮ಸಿಪಿಟಿ೨:
ಚನ್ನಪಟ್ಟಣ ನಗರದ ಅಲ್ಪಸಂಖ್ಯಾತ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ನಡೆಸಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಇಲ್ಲಿನ ಮುಖಂಡರು ಸನ್ಮಾನಿಸಿದರು.