ದೇವತೆಗಳಿಗೆ ಮಡಿಲಕ್ಕಿ ಸಮರ್ಪಿಸಿದ ಶಾಸಕ ಇಕ್ಬಾಲ್‌

KannadaprabhaNewsNetwork |  
Published : Jul 22, 2024, 01:24 AM IST
21ಕೆಆರ್ ಎಂಎನ್ 3.ಜೆಪಿಜಿರಾಮನಗರದಲ್ಲಿ ನಡೆಯುತ್ತಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ‌ ಮಹೋತ್ಸವದ ಪ್ರಯುಕ್ತ ಶಾಸಕ ಇಕ್ಬಾಲ್ ಹುಸೇನ್ ರವರು ಕೊಂಕಾಣಿ‌ ದೊಡ್ಡಿಯ ಆದಿಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಡಿಲಕ್ಕಿ ಸಮರ್ಪಿಸಿದರು. | Kannada Prabha

ಸಾರಾಂಶ

ರಾಮನಗರ: ನಾಡಿನ‌ಲ್ಲಿ ಉತ್ತಮ ಮಳೆ ಬೆಳೆಯಾಗಿ ಸುಖ ಶಾಂತಿ ನೆಮ್ಮದಿ‌ ನೆಲೆಸಲಿ ಎಂದು ಸಂಕಲ್ಪ‌ ಮಾಡಿ ಪಟ್ಟಣದ 12 ದೇವತೆಗಳಿಗೆ‌ ಮಡಿಲಕ್ಕಿ‌ ಸೇವೆ ಅರ್ಪಿಸಿದ್ದೇನೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.

ರಾಮನಗರ: ನಾಡಿನ‌ಲ್ಲಿ ಉತ್ತಮ ಮಳೆ ಬೆಳೆಯಾಗಿ ಸುಖ ಶಾಂತಿ ನೆಮ್ಮದಿ‌ ನೆಲೆಸಲಿ ಎಂದು ಸಂಕಲ್ಪ‌ ಮಾಡಿ ಪಟ್ಟಣದ 12 ದೇವತೆಗಳಿಗೆ‌ ಮಡಿಲಕ್ಕಿ‌ ಸೇವೆ ಅರ್ಪಿಸಿದ್ದೇನೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ‌ ಮಹೋತ್ಸವದ ಪ್ರಯುಕ್ತ ಕರಗ ನಡೆಯುವ ಪ್ರಮುಖ 12 ದೇವಾಲಯಗಳಿಗೆ ಭಾನುವಾರ ಭೇಟಿ‌ ನೀಡಿದ ಅವರು, ಮಡಿಲಕ್ಕಿ ಸಮರ್ಪಿಸಿ ಕೊಂಕಾಣಿ‌ ದೊಡ್ಡಿಯ ಆದಿಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಹಿಂದೂ‌ ಸಂಪ್ರದಾಯದಲ್ಲಿ ಆಷಾಡ, ಶ್ರಾವಣ ಹಾಗೂ ನವರಾತ್ರಿಯ ಸಮಯದಲ್ಲಿ ದೇವತೆಗಳಿಗೆ ಮಡಿಲಕ್ಕಿ ಕೊಡುವುದು ವಾಡಿಕೆ. ಆಗಾಗಿ ಕಳೆದ ಮೂರು ವರ್ಷಗಳಿಂದ ನಾನು ಸತತವಾಗಿ ನಗರದ ಶ್ರೀ ಚಾಮುಂಡೇಶ್ವರಿ ಕರಗ ನಡೆಯುವ ಸಮಯದಲ್ಲಿ ನಗರ ದೇವತೆಗಳಿಗೆ ಮಡಿಲಕ್ಕಿ ಸೇವೆ ಮಾಡುತ್ತಾ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿ ಈ ಕ್ಷೇತ್ರದ ಜನರ ಕಷ್ಟ ಸುಖಗಳನ್ನು ಕೇಳಲು ನನಗೆ ಜವಾಬ್ದಾರಿ ನೀಡಿ ಆಶೀರ್ವಾದ ಸಹ ಮಾಡಿದ್ದು, ಆ ತಾಯಿಯ ಹಬ್ಬವನ್ನು ಬಹಳ‌ ಶ್ರದ್ಧಾಭಕ್ರಿಯಿಂದ ಎಲ್ಲರೊಂದಿಗೆ ಆಚರಣೆ ಮಾಡುತ್ತಿದ್ದೇನೆ ಎಂದರು.

ಮಡಿಲಕ್ಕಿ ಎನ್ನುವ ಪದ ಹೆಣ್ಣಿನ ಮುತ್ತೈದೆತನವನ್ನು ಸೂಚಿಸುತ್ತದೆ. ಆ ಹಿನ್ನೆಲೆಯಲ್ಲಿ ನಾವು ನಮ್ಮ‌ ಸಂಪ್ರದಾಯ, ಸಂಸ್ಕೃತಿ, ಆಚಾರ ವಿಚಾರಗಳನ್ನು ನಡೆಸಿಕೊಂಡು ಹೋಗುವ ಜೊತೆಗೆ ಅದರ ಮಹತ್ವವನ್ನು ಹಿರಿಯರು ಇಂದಿನ‌ ಯುವ ಜನಾಂಗಕ್ಕೂ ತಿಳಿಸುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.

ನಮ್ಮ‌ ಸಂಪ್ರದಾಯದಲ್ಲಿ ತಾಯಿಗೆ ವಿಶೇಷ ಸ್ಥಾನಮಾನ ವಿದ್ದು, ಹೆಣ್ಣಿನ ಹೆಸರಿನಿಂದ ಕರೆಯಲ್ಪಡುವ ದೇವತೆಗಳನ್ನು ನಾವೆಲ್ಲರೂ ಹೆಚ್ಚಾಗಿ ಪೂಜಿಸುತ್ತೇವೆ. ಕಾಕತಾಳೀಯ ಎಂಬಂತೆ ನಮ್ಮ‌ರಾಮನಗರ ಪಟ್ಟಣದಲ್ಲಿರುವ ದೇವತೆಗಳು ಹೆಚ್ಚಾಗಿ ಹೆಣ್ಣಿನ ಹೆಸರಿನಿಂದ ಕರೆಯಲ್ಪಡುತ್ತಿರುವ ದೇವತೆಗೆಳೇ ಎಂಬುದು ವಿಶೇಷವಾಗಿದೆ.

ಶ್ರೀ ಚಾಮುಂಡೇಶ್ವರಿ ತಾಯಿ ಈ ನಾಡಿನ ಶಕ್ತಿದೇವತೆ ಆಗಿದ್ದು, ಹಿಂದಿನಿಂದಲೂ ಈ ತಾಯಿಯನ್ನು‌ ನಂಬಿ ಪೂಜಿಸಿದವರನ್ನು ರಕ್ಷಣೆ ಮಾಡುತ್ತಾ ಪಟ್ಟಣದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ನೋಡಿಕೊಂಡಿದ್ದಾಳೆ. ಅದರಿಂದಲೇ ರಾಮನಗರ ಮಣ್ಣಿಗೆ ವಿಶೇಷ ಸ್ಥಾನ, ಗೌರವ ಲಭಿಸಿದೆ ಎಂದು ಇಕ್ಬಾಲ್ ಹುಸೇನ್ ಅವರು ದೇವಿಯ ಮಹಿಮೆಯನ್ನು ಬಣ್ಣಿಸಿದರು.

12 ದೇವಾಲಯಗಳಿಗೆ ಮಡಿಲಕ್ಕಿ‌ ಸಮರ್ಪಣೆ: ದ್ಯಾವರಸೇಗೌಡನದೊಡ್ಡಿ ಶ್ರೀ ಚಾಮುಂಡೇಶ್ವರಿ ದೇವತೆ, ಕೊಂಕಾಣಿದೊಡ್ಡಿ ಆದಿಶಕ್ತಿ, ಗಾಂಧಿನಗರ ಆದಿಶಕ್ತಿ, ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ದೇವಾಲಯ, ಶೆಟ್ಟಿಹಳ್ಳಿ ಬೀದಿ ಆದಿಶಕ್ತಿ, ತೋಪ್‌ಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿ ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಬಂಡಾರಮ್ಮ, ಟ್ರೂಪ್ಲೇನ್ ಬಂಡಿ‌ ಮಹಂಕಾಳಮ್ಮ, ಐಜೂರು ಆದಿಶಕ್ತಿಪುರದ ಆದಿಶಕ್ತಿ ಅಮ್ಮನವರ ದೇವಾಲಯಗಳಿಗೆ ಅರಿಸಿನ ಕುಂಕುಮ, ಸೀರೆ, ಬಳೆ, ವೀಳ್ಯದೆಲೆ, ಅಡಿಕೆ ಹೊಂಬಾಳೆ, ಮಡಿಲಕ್ಕಿ‌ ಸಾಮಗ್ರಿ, ಬಿಚ್ಚಾಲೆ, ಪಂಚ ಫಲಗಳನ್ನು ಒಳಗೊಂಡ ಪೂಜಾ ಸಾಮಗ್ರಿಗಳನ್ನು ಮರದ ಬುಟ್ಟಿಯಲ್ಲಿರಿಸಿ ದೇವತೆಗಳಿಗೆ ಅರ್ಪಿಸಿ ಕಾಣಿಕೆ ನೀಡುವ ಮೂಲಕ ಶಾಸಕರು ಮಡಿಲಕ್ಕಿ ಸಮರ್ಪಣೆ ಮಾಡಿದರು.

ಈ‌ ವೇಳೆ ಮಾಜಿ‌ ಶಾಸಕ‌ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಪ್ರಧಾನ‌ ಕಾರ್ಯದರ್ಶಿ ಶ್ರೀನಿವಾಸ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವ ತಮ್ಮ, ವಿಜಯಕುಮಾರಿ, ಮುಖಂಡರಾದ‌ ಜಗದೀಶ್, ಷಡಕ್ಷರಿ, ಶಿವಶಂಕರ್, ಶಿವಲಿಂಗಯ್ಯ ಮತ್ತಿತರರು ಹಾಜರಿದ್ದರು.

21ಕೆಆರ್ ಎಂಎನ್ 3.ಜೆಪಿಜಿ

ರಾಮನಗರದಲ್ಲಿ ನಡೆಯುತ್ತಿರುವ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ‌ ಮಹೋತ್ಸವದ ಪ್ರಯುಕ್ತ ಶಾಸಕ ಇಕ್ಬಾಲ್ ಹುಸೇನ್ ಅವರು ಕೊಂಕಾಣಿ‌ ದೊಡ್ಡಿಯ ಆದಿಶಕ್ತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಡಿಲಕ್ಕಿ ಸಮರ್ಪಿಸಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ