ರಾಮನಗರ: ನಗರದ ಹೊರವಲಯದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ರಾಮನಗರ: ನಗರದ ಹೊರವಲಯದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಲಕಿಯರ ಹಾಸ್ಟೆಲ್ ಗೋದಾಮಿನಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಅಡಿಗೆ ಮನೆ ಸ್ವಚ್ಛತೆ ಪರಿಶೀಲಿಸಿದ ಶಾಸಕರು, ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ಸೌಲಭ್ಯಗಳ ಬಗ್ಗೆ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಹಾಸಿಗೆ ವ್ಯವಸ್ಥೆ, ಕಂಪ್ಯೂಟರ್ಗಳು, ಸ್ಯಾನಿಟರಿ ನ್ಯಾಪ್ಕಿನ್ ಬರ್ನಿಂಗ್ ಮಿಷನ್ ಅವಶ್ಯಕತೆ ಇದೆ. ಕಾಲೇಜಿಗೆ ಹೋಗಿ ಬರಲು ಸಾರಿಗೆ ಬಸ್ಸು ಬೇಕಾಗಿದೆ. ಚಿರತೆ ಹಾವಳಿ ನಿಯಂತ್ರಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಅವರ ಗಮನ ಸೆಳೆದರು.
ವಿದ್ಯಾರ್ಥಿಗಳ ಮನವಿಗೆ ಶಾಸಕರ ಸ್ಪಂದನೆ:
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿದ ಶಾಸಕ ಇಕ್ಬಾಲ್ ಹುಸೇನ್ , ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿಗಳು, ಅರಣ್ಯ ಇಲಾಖೆ, ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಪೋನ್ ಮೂಲಕ ಸಂಪರ್ಕಿಸಿ ಅಗತ್ಯ ವಸತಿ ನಿಲಯ ಮತ್ತು ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಬಾರದು. ನಾನು ನನ್ನ ಸ್ವಂತ ಖರ್ಚಿನಲ್ಲಿ ಸೌಲಭ್ಯ ಕೊಡುತ್ತೇನೆ. ಮಕ್ಕಳು ಉತ್ತಮ ವಾತಾರಣವನ್ನು ಹಾಸ್ಟೆಲ್ ನಲ್ಲಿ ನಿರ್ಮಾಣ ಮಾಡುವಂತೆ ಬಿಸಿಎಂ ಜಿಲ್ಲಾ ಅಧಿಕಾರಿ ಬೋರೇಗೌಡ ಮತ್ತು ಹಾಸ್ಟೆಲ್ ವಾರ್ಡನ್ ಗಳಿಗೆ ಶಾಸಕರು ಸೂಚನೆ ನೀಡಿದರು.
ನಂತರ ಬಾಲಕರ ಹಾಸ್ಟೆಲ್ ಗೋದಾಮಿಗೆ ಭೇಟಿ ನೀಡಿದಾಗ ಗೂಡು ಕಟ್ಟಿರುವ ಅಕ್ಕಿ ಕಂಡು ಶಾಸಕ ಇಕ್ಬಾಲ್ ಹುಸೇನ್ ವಾರ್ಡನ್ ಮೇಲೆ ಕೆಂಡ ಕಾರಿದರು. ಒಂದು ವಾರದಲ್ಲಿ ಇದನ್ನು ಸರಿ ಪಡಿಸಿಕೊಳ್ಳಲು ಸಮಯ ಕೊಡುತ್ತೇನೆ. ಸರಿಪಡಿಸಿಕೊಳ್ಳದಿದ್ದರೆ ಅಮಾನತು ಮಾಡುವ ಎಚ್ಚರಿಕೆ ನೀಡಿದರು.
ಕೋಟ್.................
ಚಿತ್ರದುರ್ಗ, ಹಾಸನ, ತರೀಕರೆ ಸೇರಿದಂತೆ ರಾಜ್ಯದ ವಿವಿಧ ಮೂಲಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಆ ಮಕ್ಕಳಿಗೆಲ್ಲ ವಸತಿ ನಿಲಯದ ಸೌಲಭ್ಯ ಇರಲಿಲ್ಲ. ಹಾಗಾಗಿ ಸರ್ಕಾರಿ ಎಂಜಿನಿಯರಂಗ್ ಕಾಲೇಜಿನ ಆವರಣದಲ್ಲಿದ್ದ ಕಟ್ಟಡವನ್ನು ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ ಪ್ರಾರಂಭಿಸಿದ್ದೇವೆ. ಸೋಲಾರ್ , ಶೌಚಾಲಯ ವ್ಯವಸ್ಥೆ ಎಲ್ಲವೂ ಚೆನ್ನಾಗಿದೆ ಎಂದು ವಿದ್ಯಾರ್ಥಿಗಳೇ ಹೇಳಿದ್ದಾರೆ. ಇನ್ನು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುತ್ತೇನೆ.
- ಇಕ್ಬಾಲ್ ಹುಸೇನ್, ಶಾಸಕರು
15ಕೆಆರ್ ಎಂಎನ್ 5.ಜೆಪಿಜಿ
ಬಾಲಕರ ಹಾಸ್ಟೆಲ್ ಗೋದಾಮಿಗೆ ಭೇಟಿ ನೀಡಿದ ಶಾಸಕ ಇಕ್ಬಾಲ್ ಹುಸೇನ್ ರವರು ಗೂಡು ಕಟ್ಟಿರುವ ಅಕ್ಕಿ ವೀಕ್ಷಿಸುತ್ತಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.