ರಾಮನಗರ: ಅನಾರೋಗ್ಯದ ನಡುವೆಯೂ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ತಮ್ಮ ಜವಾಬ್ದಾರಿಗಳನ್ನು ಮರೆಯದೆ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಪರ ಕಾಳಜಿ ಪ್ರದರ್ಶಿಸುತ್ತಿದ್ದಾರೆ
ರಾಮನಗರ: ಅನಾರೋಗ್ಯದ ನಡುವೆಯೂ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ತಮ್ಮ ಜವಾಬ್ದಾರಿಗಳನ್ನು ಮರೆಯದೆ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಪರ ಕಾಳಜಿ ಪ್ರದರ್ಶಿಸುತ್ತಿದ್ದಾರೆ.
ತೀವ್ರ ಹೃದಯಾಘಾತದ ಕಾರಣ(ಜೂನ್ 25ರಂದು) ಶಸ್ತ್ರ ಚಿಕಿತ್ಸೆಗೊಳಗಾಗಿರುವ ಶಾಸಕ ಇಕ್ಬಾಲ್ ಹುಸೇನ್ ಕನಿಷ್ಠವೆಂದರು ಎರಡು - ಮೂರು ತಿಂಗಳು ವಿಶ್ರಾಂತಿ ಪಡೆಯಬೇಕಿದೆ. ಹೀಗಾಗಿ ಕ್ಷೇತ್ರಕ್ಕೆ ವೈಯಕ್ತಿಕವಾಗಿ ಭೇಟಿ ನೀಡಲು ಸಾಧ್ಯವಾಗದ ಕಾರಣ ಶಾಸಕರು ಬೆಂಗಳೂರಿನ ತಮ್ಮ ನಿವಾಸದಿಂದಲೇ ಅಭಿವೃದ್ಧಿ ಕಾರ್ಯಗಳ ಮೇಲೆ ನಿಗಾ ವಹಿಸುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರತಿನಿತ್ಯ ಕ್ಷೇತ್ರದಲ್ಲಿ ಒಂದಲ್ಲಾ ಒಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಜೊತೆಗೆ ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಜನರ ನಡುವೆಯೇ ಓಡಾಡಿಕೊಂಡಿದ್ದ ಇಕ್ಬಾಲ್ ಹುಸೇನ್ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದೇ ಭಾವಿಸಲಾಗಿತ್ತು.
ಅಧಿಕಾರಿಗಳಿಗೆ ಮಾರ್ಗದರ್ಶನ :
ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದ್ದಂತೆ ಇಕ್ಬಾಲ್ ಹುಸೇನ್ ತಮ್ಮ ದಿನಚರಿಯಲ್ಲಿಯೂ ಬದಲಾವಣೆ ತಂದುಕೊಂಡಿದ್ದು, ದಿನಪತ್ರಿಕೆಗಳನ್ನು ಓದಲು ಒಂದಿಷ್ಟು ಸಮಯ ಮೀಸಲಿಟ್ಟಿದ್ದಾರೆ. ಆನಂತರ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿ ಪಡೆದು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಮುಂಗಾರಿನಲ್ಲಿ ವಾಡಿಕೆಗಿಂದ ಮಳೆ ಕಡಿಮೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ರಾಮನಗರ ಕ್ಷೇತ್ರದಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವು ಪೂರೈಕೆಯಲ್ಲಿ ಸಮಸ್ಯೆ ಎದುರಾಗದಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ. ರಾಮನಗರದ ಸರ್ವಾಂಗೀಣ ಪ್ರಗತಿಗೆ ಅವರು ಹೊಂದಿರುವ ಕಾಳಜಿಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗದ ಕಾರಣ ಶಾಸಕರು, ತಮ್ಮ ಆಪ್ತ ಸಹಾಯಕರು, ಕಚೇರಿ ಸಿಬ್ಬಂದಿ ಹಾಗೂ ಕ್ಷೇತ್ರದ ನಾಯಕರ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಗಳನ್ನು ರವಾನಿಸುತ್ತಿದ್ದಾರೆ. ಅಲ್ಲದೆ, ಅನಾರೋಗ್ಯವನ್ನು ಲೆಕ್ಕಿಸದೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಮಾರ್ಗದರ್ಶನ ಮಾಡುತ್ತಿದ್ದಾರೆ.
ತಮ್ಮ ಕ್ಷೇತ್ರದ ಅನುದಾನಗಳು ಹಾಗೂ ಹಣಕಾಸಿನ ಅನುಮೋದನೆಗಳಿಗೆ ಅಗತ್ಯವಿರುವ ಸಹಿ ಮತ್ತು ಸೂಚನೆಗಳನ್ನು ನೀಡಿ ಆಡಳಿತಾತ್ಮಕ ಕೆಲಸಗಳಿಗೆ ತಡೆಯಾಗದಂತೆ ಇಕ್ಬಾಲ್ ಹುಸೇನ್ ನೋಡಿಕೊಳ್ಳುತ್ತಿದ್ದಾರೆ. ಶಾಸಕರ ಅನುಪಸ್ಥಿತಿ ಕ್ಷೇತ್ರದ ಜನರಿಗಷ್ಟೇ ಅಲ್ಲ ಕಾಂಗ್ರೆಸ್ ಮುಖಂಡರಿಗೂ ಕಾಡುತ್ತಿದೆ. ಪ್ರತಿನಿತ್ಯ ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಂಡು ಪರಿಹಾರ ಪಡೆಯಲು ಬರುತ್ತಿದ್ದ ಜನಸಾಮಾನ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸರ್ಕಾರಿ ಅಧಿಕಾರಿಗಳಿಂದ ಗಿಜಿಗುಡುತ್ತಿದ್ದ ಶಾಸಕರ ಕಾರ್ಯಾಲಯ ಜನರಿಲ್ಲದೆ ಬಣಗುಡುತ್ತಿದೆ. ಆದರೆ, ಕ್ಷೇತ್ರದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ತೊಡಕುಂಟಾಗಿಲ್ಲ. ಆರೋಗ್ಯದ ಸಮಸ್ಯೆಯನ್ನೂ ಲೆಕ್ಕಿಸದೆ ಶಾಸಕರು ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವುದು ಅವರಲ್ಲಿರುವ ಕರ್ತವ್ಯ ನಿಷ್ಠೆ ಮತ್ತು ನಾಯಕತ್ವ ಗುಣವನ್ನು ಪ್ರತಿಬಿಂಬಿಸುತ್ತಿದೆ.
ಬಾಕ್ಸ್ ...............
ಕಳೆದ ಎರಡು ದಿನಗಳ ಹಿಂದಷ್ಟೇ ಶಾಸಕ ಇಕ್ಬಾಲ್ ಹುಸೇನ್ ರವರು ಹಾರೋಹಳ್ಳಿ ತಹಸೀಲ್ದಾರ್ ಅವರಿಗೆ ಎಸ್ ಐಆರ್ ಪ್ರಕ್ರಿಯೆಯಲ್ಲಿ ಯಾವೊಬ್ಬ ಮತದಾರನ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸಿ ಬಿಎಲ್ ಒಗಳ ಮೂಲಕ ಎಸ್‌ಐಆರ್ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದ್ದರು. ಇಂದು ಮುಜರಾಯಿ ಇಲಾಖೆಯ ವತಿಯಿಂದ ರಾಮನಗರದ ಶಕ್ತಿ ದೇವತೆ ಬನ್ನಿ ಮಹಾಂಕಾಳಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗಾಗಿ 10 ಲಕ್ಷ ರುಪಾಯಿಗಳ ಧನಸಹಾಯದ ಚೆಕ್ ಅನ್ನು ದೇವಾಲಯ ಸಮಿತಿ ಸದಸ್ಯರಿಗೆ ವಿತರಣೆ ಮಾಡಿದ್ದಾರೆ. ಅಲ್ಲದೆ, ತಹಸೀಲ್ದಾರ್ ತೇಜಸ್ವಿನಿ ಮತ್ತು ನಗರಸಭೆ ಆಯುಕ್ತ ಜಯಣ್ಣ ಅವರೊಂದಿಗೆ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಚರ್ಚೆ ನಡೆಸಿದ್ದಾರೆ.
20ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಬನ್ನಿ ಮಹಾಂಕಾಳಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ 10 ಲಕ್ಷ ರು.ಗಳ ಚೆಕ್ ಅನ್ನು ಶಾಸಕ ಇಕ್ಬಾಲ್ ಹುಸೇನ್ ದೇವಸ್ಥಾನ ಸಮಿತಿ ಸದಸ್ಯರಿಗೆ ವಿತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.