‘ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳ ಪರಿಶೀಲನೆ ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಯೋಜನೆ ಇರಬಹುದು. ಇ.ಡಿ. ನೋಟಿಸ್ ನೀಡಿದರೆ ಉತ್ತರಿಸುತ್ತೇನೆ. ನಾನು ಈಗ ವಿರೋಧಿಗಳನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದೇನೆ
ಬೆಂಗಳೂರು : ‘ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳ ಪರಿಶೀಲನೆ ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಯೋಜನೆ ಇರಬಹುದು. ಇ.ಡಿ. ನೋಟಿಸ್ ನೀಡಿದರೆ ಉತ್ತರಿಸುತ್ತೇನೆ. ನಾನು ಈಗ ವಿರೋಧಿಗಳನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದೇನೆ. ದೂರು ಕೊಟ್ಟಿದ್ದು ಸ್ವಪಕ್ಷದವರೇ ಅಥವಾ ಬೇರೆಯವರೇ ಎಂಬುದನ್ನು ಕಂಡು ಹಿಡಿಯೋಣ’ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇ.ಡಿ. ದಾಳಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರ ಟಾರ್ಗೆಟ್ ಹೊಸದೇನಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನೂ ಟಾರ್ಗೆಟ್ ಮಾಡಿದ್ದರು. ವಾಲ್ಮೀಕಿ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದಾಳಿ ಆಗಿದೆ. ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧವೂ ಮಾಡಿದ್ದರು. ಇದೀಗ ನನ್ನ ಮೇಲೆ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಿದರು.
ನನಗೆ ಬಿಜೆಪಿಗೆ ಬನ್ನಿ ಎಂದು ಯಾರೂ ಆಫರ್ ಮಾಡಿಲ್ಲ. ಆದರೂ ಇದು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ಇರಬಹುದು. ನಾವು ಹೆಚ್ಚು ಸ್ಥಾನ ಗೆದ್ದಿದ್ದೀವಲ್ಲಾ? ಎಂದರು.
ವಿದೇಶಕ್ಕೆ ಹತ್ತು ವರ್ಷದಿಂದ ಹೋಗುತ್ತಿದ್ದೇನೆ. ಗಣಿಗಾರಿಕೆ ಮಾಡಲು ಉತ್ಸಾಹ ಹೊಂದಿದ್ದೇನೆ. ಅದಕ್ಕಾಗಿ ಹುಡುಕಾಟದಲ್ಲಿದ್ದೆ. ಆದರೆ ಇವರು ಈಗಾಗಲೇ ಹೂಡಿಕೆ ಮಾಡಿದ್ದೇನೆ ಎನ್ನುತ್ತಿದ್ದಾರೆ. ನಾವು ಹೂಡಿಕೆಗೆ ಅವಕಾಶ ಹುಡುಕುತ್ತಿದ್ದೇವೆ ಅಷ್ಟೇ. ಯಾವುದೇ ಒಪ್ಪಂದ ಆಗಿಲ್ಲ. ಇನ್ನೂ ಮಾತುಕತೆ ಹಂತದಲ್ಲೇ ಇದೆ. ಅಂತಿಮವಾಗಿಲ್ಲ. ಪರಿಶೀಲನೆ ಮಾಡುವ ಅಧಿಕಾರ ಅವರಿಗಿದೆ, ಮಾಡಿದ್ದಾರೆ. ಅವರು ಯಾವಾಗ ನೋಟಿಸ್ ನೀಡಿದರೂ ಎಲ್ಲಾ ಉತ್ತರ ಕೊಡುತ್ತೇವೆ ಎಂದು ಸತೀಶ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮೇಲೆಯೇ ಏಕೆ ದಾಳಿ?:
ಈ ಬಾರಿ ವಾಲ್ಮೀಕಿ ನಾಯಕರು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಕಾಂಗ್ರೆಸ್ ಮೇಲೆಯೇ ಯಾಕೆ ದಾಳಿ ಮಾಡುತ್ತಿದ್ದಾರೆ? ಬಿಜೆಪಿಗರ ಮೇಲೆ ಯಾಕೆ ಮಾಡುತ್ತಿಲ್ಲ? ನಮ್ಮ ಜತೆಗೆ ಅವರ ಮೇಲೂ ದಾಳಿ ಮಾಡಿದರೆ ಸರಿ ಎನ್ನಬಹುದು. ಇದೀಗ ನಮ್ಮ ಮೇಲೆ ದಾಳಿ ಮಾಡಿ ಪ್ರಕರಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನೋಡುತ್ತೇವೆ ಎಂದರು.
₹2,000 ಕೋಟಿ ವಹಿವಾಟಿದೆ, ₹2 ಕೋಟಿ ದೊಡ್ಡದಲ್ಲ: ಸತೀಶ್
ನಮ್ಮ ಸಂಸ್ಥೆಗಳ ವಾರ್ಷಿಕ ವಹಿವಾಟು 2000 ಕೋಟಿ ರು.ಗೂ ಅಧಿಕ ಇದೆ. ಹೀಗಿರುವಾಗ ಇ.ಡಿ ಪರಿಶೀಲನೆ ವೇಳೆ ಸಿಕ್ಕಿದೆ ಎನ್ನಲಾದ 2 ಕೋಟಿ ರು. ನಗದು ನಮಗೆ ದೊಡ್ಡ ಮೊತ್ತವೇ ಅಲ್ಲ ಎಂದು ಜಾರಕಿಹೊಳಿ ಹೇಳಿದರು.
ನಮ್ಮ ಮನೆಯಲ್ಲಿ ಪತ್ತೆಯಾದ 2 ಕೋಟಿ ರು. ನಮ್ಮದೇ. ಅದನ್ನು ಕಾನೂನುಬದ್ಧವಾಗಿ ಕ್ಲೇಮು ಮಾಡುತ್ತೇವೆ. ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ ರೂಪಿಸಿದ್ದೆವು. ಆದರೆ ಇನ್ನೂ ಹೂಡಿಕೆ ಮಾಡಿಲ್ಲ. ಮಾಡುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವಿದೇಶಿ ಹೂಡಿಕೆ ವಿಚಾರ ಮುಂದಿಟ್ಟುಕೊಂಡು ನಮ್ಮ ಮೇಲೆ ಇ.ಡಿ. ದಾಳಿ ನಡೆಸಲಾಗಿದೆ. ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಮಾಡಿರುವುದು ನಿಜ. ಈ ಸಂಬಂಧ ಆದಾಯ ತೆರಿಗೆ ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆ ಒದಗಿಸಿದ್ದೇವೆ. ಇ.ಡಿ. ಕೇಳಿದಾಗಲೂ ಅಗತ್ಯ ದಾಖಲೆ ನೀಡುತ್ತೇವೆ ಎಂದು ವಿವರಿಸಿದರು.

