ಮೃತ ಬಾಲಕಿ ಹೃತೀಕ್ಷಾ ಮನೆಗೆ ಶಾಸಕ ಕೆ.ಎಂ.ಉದಯ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

KannadaprabhaNewsNetwork |  
Published : May 30, 2025, 12:57 AM IST
29ಕೆಎಂಎನ್ ಡಿ13 | Kannada Prabha

ಸಾರಾಂಶ

ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಹಾವು, ನಾಯಿ ಕಡಿತದ ಚುಚ್ಚುಮದ್ದು ಜತೆಗೆ ಕ್ರಿಮಿನಾಶಕ ಸೇವಿಸಿ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಮತ್ತು ಅಗತ್ಯ ಚುಚ್ಚುಮದ್ದನ್ನು ಶೇಖರಣೆ ಮಾಡುವಂತೆ ಸಚಿವರು ಆದೇಶ ನೀಡಿದ್ದರೂ ಕೆಲ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯದಲ್ಲಿ ಸಂಚಾರಿ ಪೊಲೀಸರ ವಾಹನ ತಪಾಸಣೆ ವೇಳೆ ಆಯಾತಪ್ಪಿ ಬಿದ್ದು ಮೃತಪಟ್ಟ ತಾಲೂಕಿ ಗೊರವನಹಳ್ಳಿ ಹೃತೀಕ್ಷಾ ನಿವಾಸಕ್ಕೆ ಶಾಸಕ ಕೆ.ಎಂ.ಉದಯ್ ಭೇಟಿ ನೀಡಿ ಪೋಷಕರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗ್ರಾಮದ ಮೃತ ಬಾಲಕಿ ಪೋಷಕರು ಮತ್ತು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಿದರು. ಬಳಿಕ ತಪ್ಪಿತಸ್ಥರ ವಿರುದ್ಧ ಅಗತ್ಯ ಶಿಸ್ತು ಕ್ರಮದ ಭರವಸೆ ನೀಡುವ ಜತೆಗೆ ವೈಯಕ್ತಿಕ ಪರಿಹಾರ ನೀಡಿದರು.

ಮೃತಳ ತಾತ ಹಾಗೂ ತಂದೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ನಾಯಿ ಕಡಿತದ ಚಿಕಿತ್ಸೆಗೆಂದು ತಾಲೂಕು ಆಸ್ಪತ್ರೆಗೆ ತೆರಳಿದ್ದ ವೇಳೆ ಕರ್ತವ್ಯ ನಿರತ ವೈದ್ಯರು ಕೇವಲ ಚುಚ್ಚುಮದ್ದನ್ನು ನೀಡಿ ಬಳಿಕ ಸಮರ್ಪಕವಾಗಿ ಚಿಕಿತ್ಸೆ ನೀಡದೆ ಮಂಡ್ಯಕ್ಕೆ ತೆರಳುವಂತೆ ಸೂಚನೆ ನೀಡಿದರು. ಯಾವುದೇ ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು.

ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡದೆ ಇಂತಹ ಘಟನೆಗಳು ಮರುಕಳಿಸುತ್ತಿವೆ. ಮುಂದೆ ಇಂತಹ ಪ್ರಕರಣಗಳು ಜರುಗದಂತೆ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಶಾಸಕರು, ಮಗು ಮೃತಪಟ್ಟ ಬಗ್ಗೆ ವಿಷಾಧವಿದೆ. ಡೀಸಿ, ಎಸ್ಪಿ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ತಿಳಿಸಿದ್ದಾಗಿ, ನಂತರ ಎಸ್ಪಿ ಮೂವರು ಸಿಬ್ಬಂದಿಯನ್ನು ಅಮಾನತ್ತುಗೊಳಿಸಿರುವುದಾಗಿ ಹೇಳಿದರು.

ತಾಲೂಕು ಆಸ್ಪತ್ರೆಯಲ್ಲಿ ಹಾವು, ನಾಯಿ ಕಡಿತದ ಚುಚ್ಚುಮದ್ದು ಜತೆಗೆ ಕ್ರಿಮಿನಾಶಕ ಸೇವಿಸಿ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಮತ್ತು ಅಗತ್ಯ ಚುಚ್ಚುಮದ್ದನ್ನು ಶೇಖರಣೆ ಮಾಡುವಂತೆ ಸಚಿವರು ಆದೇಶ ನೀಡಿದ್ದರೂ ಕೆಲ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವುದಾಗಿ ಹೇಳಿದರು.

ಇದೇ ವೇಳೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಅವರನ್ನು ಕೂಡಲೇ ಅಮಾನತ್ತುಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಡಿಎಚ್‌ಒ ಡಾ.ಮೋಹನ್‌ ಅವರನ್ನು ದೂರವಾಣಿ ಮೂಲಕ ಕ್ರಮ ವಹಿಸಲು ತಿಳಿಸಿರುವುದಾಗಿ ಹೇಳಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸದಸ್ಯರಾದ ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮಹಿಳಾ ಅಧ್ಯಕ್ಷೆ ಮಮತಾ ಶಂಕರೇಗೌಡ, ಬಿಇಒ ಧನಂಜಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ರಾಘವ, ಗ್ರಾಪಂ ಮಾಜಿ ಅಧ್ಯಕ್ಷ ಮಧು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’