ಕಾನೂರು ಗ್ರಾಮ ಪಂಚಾಯಿತಿಯಲ್ಲಿ ನಿವೃತ್ತ ಪಿಡಿಒ ಶ್ರೀನಿವಾಸ್ ಗೆ ಆತ್ಮೀಯ ಸನ್ಮಾನ
ಕಾನೂರು ಗ್ರಾಮ ಪಂಚಾಯಿತಿಯಲ್ಲಿ 13 ವರ್ಷಗಳ ಕಾಲ ಪಿಡಿಒ ಆಗಿದ್ದ ಶ್ರೀನಿವಾಸ್ ಸಮರ್ಥವಾಗಿ ಕೆಲಸ ನಿರ್ವಹಿಸಿ ಉತ್ತಮ ಹೆಸರು ಪಡೆದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಯನಾ ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುವಾರ ಕಾನೂರು ಗ್ರಾಪಂ ಆವರಣದಲ್ಲಿ ನಿವೃತ್ತ ಪಿಡಿಒ ಶ್ರೀನಿವಾಸ್ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು. ಪಿಡಿಒ ಹುದ್ದೆಯಲ್ಲಿ ಸದಾ ಒತ್ತಡದಲ್ಲಿ ಕೆಲಸ ಮಾಡಬೇಕು. ಆದರೂ ಶ್ರೀನಿವಾಸ್ ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲಾ ಕಾಮಗಾರಿಗಳನ್ನು ಮುಗಿಸಿದ್ದಾರೆ ಎಂದರು.ಗ್ರಾಪಂ ಉಪಾಧ್ಯಕ್ಷ ಎಂ.ಸಿ.ನಾಗೇಶ್ ಮಾತನಾಡಿ, ಪಿಡಿಒ ಶ್ರೀನಿವಾಸ್ ಕಾನೂರು ಗ್ರಾಪಂನಲ್ಲಿ 13 ವರ್ಷ ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಅವರು ಪಿಡಿಒ ಹುದ್ದೆ ವಹಿಸಿಕೊಂಡ ನಂತರ ಹಲವಾರು ಸಮಸ್ಯೆ ಗಳನ್ನು ಬಗೆಹರಿಸಿದ್ದಾರೆ. ಕಾನೂರು ಗ್ರಾಮ ಪಂಚಾಯಿತಿ ಈಗ ಅಭಿವೃದ್ಧಿ ಕಂಡಿದೆ. ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯ ಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ಮರೆಯುವಂತಿಲ್ಲ ಎಂದರು.
ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪಿಡಿಒ ಶ್ರೀನಿವಾಸ್, 1987ರಲ್ಲಿ ಮಂಡಲ ಪಂಚಾಯಿತಿ ಆದ ಸಂದರ್ಭದಲ್ಲಿ ನಾನು ಉದ್ಯೋಗಕ್ಕೆ ಸೇರಿದ್ದೆ. ಪ್ರಸ್ತುತ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಸಮಸ್ಯೆಗಳಿವೆ. ಆದರೆ, ಬಡವರಿಗೆ ಉಪಕಾರ ಮಾಡಲು ಗ್ರಾಪಂ ಪಿಡಿಒ ಗಳಿಗೆ ಹೇರಳ ಅವಕಾಶವಿದೆ. ಕಾನೂರು ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಒಂದು ಕುಟುಂಬವಿದ್ದಂತೆ. ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸ ಮಾಡಲು ನನಗೆ ಅನುಕೂಲ ವಾಯಿತು. ನನ್ನ 38 ವರ್ಷಗಳ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ತೃಪ್ತಿ ನನಗೆ ಸಿಕ್ಕಿದೆ ಎಂದರು.
ಸಭೆ ಅಧ್ಯಕ್ಷತೆಯನ್ನು ಕಾನೂರು ಗ್ರಾಪಂ ಅಧ್ಯಕ್ಷ ರತ್ನಾಕರ್ ವಹಿಸಿದ್ದರು. ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಮನೋಹರ, ನಯನಾ, ಸವಿತಾ,ಹೇಮಲತ, ವಿಶಾಂತಿ ಡಿ.ಸೋಜ, ವಿಜಯಕುಮಾರ್, ನಾಗರತ್ನ, ಶಿವಮೂರ್ತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕೇಶ್ ಇದ್ದರು.