ಸಿಎಂ, ಡಿಸಿಎಂ ರಾಜೀನಾಮೆಗೆ ಶಾಸಕ ಕಾಮತ್ ಆಗ್ರಹ

KannadaprabhaNewsNetwork |  
Published : Oct 17, 2023, 12:45 AM IST
ಪ್ರತಿಭಟನೆಯಲ್ಲಿ ಮಾತನಾಡುತ್ತಿರುವ ಶಾಸಕ ವೇದವ್ಯಾಸ ಕಾಮತ್‌. | Kannada Prabha

ಸಾರಾಂಶ

ಐಟಿ ದಾಳಿಯಲ್ಲಿ ಕಾಂಗ್ರೆಸ್‌ ಮುಖಂಡರ ಆಪ್ತರ ಮನೆಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ. ಇದು ಕಾಂಗ್ರೆಸ್‌ನ ಕಮಿಷನ್‌ ದಂಧೆಗೆ ಸಾಕ್ಷಿ ಎಂದು ಕಾಮತ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು ರಾಜ್ಯದಲ್ಲಿ ಕಾಂಗ್ರೆಸ್‌ ಕಳ್ಳಾಟ ಐಟಿ ದಾಳಿಯ ಮೂಲಕ ಬಯಲಾಗಿದೆ. ವರ್ಗಾವಣೆ, ಕಮಿಷನ್‌ ದಂಧೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ರಾಜೀನಾಮೆ ನೀಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಕಮಿಷನ್‌ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಐಟಿ ದಾಳಿಯಲ್ಲಿ ಕಾಂಗ್ರೆಸ್‌ ಮುಖಂಡರ ಆಪ್ತರ ಮನೆಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ. ಇದು ಕಾಂಗ್ರೆಸ್‌ನ ಕಮಿಷನ್‌ ದಂಧೆಗೆ ಸಾಕ್ಷಿ ಎಂದು ಕಾಮತ್‌ ಆರೋಪಿಸಿದರು. ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶೇ.40 ಕಮಿಷನ್‌ ಆರೋಪ ಮಾಡಿತ್ತು. ಆದರೆ ಈ ಬಗ್ಗೆ ಯಾವುದೇ ದಾಖಲೆ ನೀಡಿರಲಿಲ್ಲ. ತಾವು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಈಗ ಕಮಿಷನ್‌ ದಂಧೆ ನಡೆಸುತ್ತಿದೆ ಎಂದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಗೆ ಹಣ ಇಲ್ಲದಂತಾಗಿದೆ. ಶಾಸಕರ ಅನುದಾನ ಬಿಡುಗಡೆ ಆಗಿಲ್ಲ. ಬಿಸಿಯೂಟ ಯೋಜನೆಗೂ ಹಣವಿಲ್ಲ. ವಿದ್ಯುತ್‌ ದರ, ತೆರಿಗೆ ಹೆಚ್ಚಳ ಮಾಡಲಾಗಿದೆ. ಜನರಿಗೆ ಕತ್ತಲಭಾಗ್ಯ ನೀಡಲಾಗಿದೆ. ಕೆಎಸ್‌ಆರ್‌ಟಿಸಿಗೆ ಅನುದಾನ ಬಿಡುಗಡೆ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣ ಕೆಲವೇ ಮಂದಿಗೆ ಒಂದು ಕಂತು ಮಾತ್ರ ಬಂದಿದೆ. ಜನರಿಗೆ ಕಷ್ಟ ನೀಡಿ ಕಾಂಗ್ರೆಸ್‌ ಸರಕಾರ ಕೋಟಿ ಕೋಟಿ ಹಣ ಬಾಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಭ್ರಷ್ಟಾಚಾರದ ಸರ್ಕಾರ. ಕರ್ನಾಟಕ ಸರ್ಕಾರ ಕಾಂಗ್ರೆಸ್‌ ಪಕ್ಷದ ಎಟಿಎಂ ಆಗಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಕಮಿಷನ್‌ ಪಡೆಯುತ್ತಿರುವ ಸರ್ಕಾರ, ಈಗ ಗುತ್ತಿಗೆದಾರರಿಗೆ ಬಿಲ್‌ ಮೊತ್ತ ಪಾವತಿಸಿ ಅದರಿಂದಲೂ ಕಮಿಷನ್‌ ಪಡೆದಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳನ್ನು ನೀಡದೆ ವಂಚಿಸುತ್ತಿದೆ ಎಂದರು. ಮೇಯರ್‌ ಸುಧೀರ್‌ ಶೆಟ್ಟಿಕಣ್ಣೂರು, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್‌ ಬೆಳ್ತಂಗಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷೆ ಪ್ರಭಾಮಾಲಿನಿ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟಿ, ಮನಪಾ ಸಚೇತಕ ಪ್ರೇಮಾನಂದ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಬಂಗೇರ, ರಮೇಶ್‌ ಕಂಡೆಟ್ಟು, ಪ್ರಮುಖರಾದ ಶಕೀಲಾ ಕಾವ, ಪೂರ್ಣಿಮಾ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾಟೆ ಸ್ವಯಂ ರಕ್ಷಣೆಗೆ ಆಗತ್ಯ
ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟ: ಕ್ರಮಕ್ಕೆ ಆಗ್ರಹ