ಕೊಳ್ಳೇಗಾಲ ಪ್ರಮುಖ ರಸ್ತೆ ಅಗಲೀಕರಣಕ್ಕೆ ಶಾಸಕ ಕೃಷ್ಣಮೂರ್ತಿ ಆಸಕ್ತಿ

KannadaprabhaNewsNetwork |  
Published : Aug 25, 2025, 01:00 AM IST
ನಗರ | Kannada Prabha

ಸಾರಾಂಶ

ಇದರಿಂದಾಗಿ ಡಾ. ರಾಜ್ ಕುಮಾರ್ ರಸ್ತೆಯಲ್ಲಿ 70ಕ್ಕೂ ಅಧಿಕ ಹಾಗೂ ಅಂಬೇಡ್ಕರ್ ರಸ್ತೆಯಲ್ಲಿ 72 ರಿಂದ 75ಕ್ಕೂ ಅಧಿಕ ಖಾಸಗಿ ಆಸ್ತಿಗಳ ತೆರವು ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

ಎನ್. ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ. ಆರ್. ಕೖಷ್ಣಮೂರ್ತಿ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದು, ಈ ಹಿನ್ನೆಲೆ ಹಲವು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಮುಖ್ಯರಸ್ತೆಗಳಾದ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಡಾ. ರಾಜ್ ಕುಮಾರ್ ರಸ್ತೆಗಳ ಅಗಲೀಕರಣಕ್ಕೆ ಶಾಸಕರು ಉತ್ಸುಕರಾಗಿದ್ದು, ಈ ಸಂಬಂಧ ಆ.26ರ ಮಂಗಳವಾರ ಅಂತಿಮ ಜಂಟಿ ಸರ್ವೇ ನಡೆಸಿ ಕ್ರಮಕೈಗೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ಕರೆಯಲಾಗಿದೆ.

ಹೌದು, ಪಟ್ಟಣದ ಡಾ.ರಾಜ್ ಕುಮಾರ್, ಡಾ.ಬಿ.ಆರ್‌. ಅಂಬೇಡ್ಕರ್ ರಸ್ತೆಗಳ ಅಗಲೀಕರಣವಾಗಬೇಕು, ವಾಹನ ಸಂಚಾರ ದಟ್ಟಣೆ ಹೆಚ್ಚಿದ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ರಸ್ತೆ 80 ಅಡಿ ಅಗಲವಾದರೆ ಸಾಕಷ್ಟು ಅಭಿವೃದ್ಧಿ ಸಾಧ್ಯತೆ ಇದೆ ಎಂದು ಮನಗಂಡಿರುವ ಶಾಸಕರು, ಈಗಾಗಲೇ ಮೊದಲ ಹಂತದ ಸರ್ವೇ ಕಾರ್ಯ ಮುಗಿಸಿದ್ದಾರೆ. ಸರ್ವೇ ಕಾರ್ಯದಲ್ಲಿ 80 ಅಡಿ ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳು ತಮ್ಮ ಕೆಲಸ ಪೂರ್ಣಗೊಳಿಸಿದ್ದಾರೆ.

ಖಾಸಗಿ ಆಸ್ತಿ ತೆರವು ಸಾಧ್ಯತೆ:

ಇದರಿಂದಾಗಿ ಡಾ. ರಾಜ್ ಕುಮಾರ್ ರಸ್ತೆಯಲ್ಲಿ 70ಕ್ಕೂ ಅಧಿಕ ಹಾಗೂ ಅಂಬೇಡ್ಕರ್ ರಸ್ತೆಯಲ್ಲಿ 72 ರಿಂದ 75ಕ್ಕೂ ಅಧಿಕ ಖಾಸಗಿ ಆಸ್ತಿಗಳ ತೆರವು ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

ಮಂಗಳವಾರ ಮಹತ್ವದ ಸಭೆ:

ಹಲವು ದಶಕಗಳಿಂದಲೂ ಈ ಎರಡು ರಸ್ತೆಗಳನ್ನು ಅಗಲೀಕರಣ ಮಾಡಬೇಕೆಂಬ ನಾಗರಿಕರ ಕೂಗು ಆಲಿಸಿರುವ ಶಾಸಕ ಎ. ಆರ್. ಕೖಷ್ಣಮೂರ್ತಿ ಅವರು ಈ ಸಂಬಂಧ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದು, 2 ಸಭೆಗಳನ್ನು ಸಹ ನಡೆಸಿದ್ದಾರೆ. ಶಾಸಕರು ಅಂದುಕೊಂಡಂತೆ ಆಗಿದ್ದರೆ ಕಳೆದ 3 ತಿಂಗಳ ಹಿಂದೆಯೇ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ರಸ್ತೆ ಅಗಲೀಕರಣಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇತ್ತು. ಆದರೆ ಕೆಲ ಅಧಿಕಾರಿಗಳು ಹಾಗೂ ನಗರಸಭೆಯ ಕೆಲ ಸದಸ್ಯರು ಈ ವಿಚಾರದಲ್ಲಿ ಹಿಂದೆ ಸರಿದ ಕಾರಣ ಹಿನ್ನಡೆಯುಂಟಾಗಿತ್ತು. ಈ ಕುರಿತು ಕಳೆದ 1 ತಿಂಗಳ ಹಿಂದೆ ನಡೆದ ನಗರಸಭೆ ಸಭೆಯಲ್ಲೇ ಶಾಸಕರು ಬಹಿರಂಗವಾಗಿ ನಗರಸಭೆ ಕೆಲ ಸದಸ್ಯರು, ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ಆ.26 ಮಂಗಳವಾರ ನಡೆಯುವ ಸಭೆ ಮಹತ್ವ ಪಡೆದುಕೊಂಡಿದೆ. ಕಂದಾಯಾಧಿಕಾರಿಗಳು, ಲೋಕೋಪಯೋಗಿ ಇಲಾಖೆ, ತಾಲೂಕು ಭೂ ದಾಖಲೆಗಳ ಇಲಾಖೆ , ನಗರಸಭೆ ಅಧಿಕಾರಿಗಳು ಸೇರಿ ಹಲವು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಇದು ರಸ್ತೆ ಅಗಲೀಕರಣದ ಸಂಬಂಧ ನಡೆಯುವ ಅಂತಿಮ ಸಿದ್ಧತಾ ಸಭೆ ಎನ್ನಲಾಗುತ್ತಿದೆ.

ಬ್ಲೂಪ್ರಿಂಟ್ ತಯಾರಿಕೆ ಸಾಧ್ಯತೆ:

ಸಭೆಯಲ್ಲಿ ರಸ್ತೆ ಅಗಲೀಕರಣದಿಂದ ಅಂತಿಮವಾಗಿ ತೆರವಾಗುವ ಖಾಸಗಿ ಹಾಗೂ ಸರ್ಕಾರಿ ಆಸ್ತಿ ವಿವರ ,

ಆಗಬೇಕಾದ ಅಭಿವೃದ್ಧಿ ವಿವರಗಳ ಕುರಿತು ಬ್ಲೂಪ್ರಿಂಟ್ ತಯಾರಿಸಲಾಗುತ್ತದೆ. ಪ್ರಕ್ರಿಯೆ ಶೀಘ್ರ ಆರಂಭಿಸುವ ಸಂಬಂಧ ಹಾಗೂ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿ ಅನುಮೋದನೆ ಪಡೆಯುವ ಹಿನ್ನೆಲೆ ಈ ಸಭೆ ಸಾಕಷ್ಟು ಚರ್ಚೆಗೂ ಗ್ರಾಸವಾಗುತ್ತಿದೆ. ರಸ್ತೆ ಅಗಲೀಕರಣದಿಂದ ತೆರವಾಗುವ ಖಾಸಗಿ ಆಸ್ತಿ, ಬಳಿಕ ರಸ್ತೆ, ಚರಂಡಿ ನಿರ್ಮಾಣ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಾಗಿ 90 ರಿಂದ 100 ಕೋಟಿ ರು. ಅಂದಾಜು ಮೊತ್ತವಾಗುವ ಕುರಿತು ಈಗಾಗಲೇ ಅಧಿಕಾರಿಗಳು ಲೆಕ್ಕಾಚಾರ ಮಾಡಿದ್ದಾರೆ ಎನ್ನಲಾಗಿದೆ.

ರಸ್ತೆ ಅಗಲೀಕರಣ ಪ್ರಕ್ರಿಯೆಯಿಂದ ಡಾ.ರಾಜ್ ಕುಮಾರ್ ರಸ್ತೆಯಲ್ಲಿನ 70 ಖಾಸಗಿ ಹಾಗೂ ಸರ್ಕಾರಿ ಆಸ್ತಿ ತೆರವಾಗುವ ಸಾಧ್ಯತೆ ಇದ್ದು, ಈ ಪೈಕಿ ಎಪಿಎಸ್ ಬಟ್ಟೆ ಅಂಗಡಿ, ವಿನಯ್ ಸೀಸನ್ ಕಾರ್ನರ್ ಮಳಿಗೆ, ಕೆನರಾ ಬ್ಯಾಂಕ್, ಬೇಕರಿ, ಪಂಪ್ ಹೌಸ್ ಹೀಗೆ ಹಲವು ಜಾಗಗಳಲ್ಲಿ ಈಗಾಗಲೇ ತೆರವು ಮಾಡುವ ಸ್ಥಳದ ಕುರಿತು ನಕ್ಷೆ ಮಾಡಲಾಗಿದೆ.

ಡಾ. ಬಿ.ಆರ್.ಅಂಬೇಡ್ಕರ್ ರಸ್ತೆಯ ಭಾಗದಲ್ಲಿ ರವಿ ಮೆಡಿಕಲ್, ಮಾರ್ಕೆಟ್ ಸರ್ಕಲ್ ನ ಕೆಲ ಮಳಿಗೆಗಳು, ಅಂಜುಮಾನ್ ವಾಣಿಜ್ಯ ಸಂಕೀರ್ಣದಲ್ಲಿನ ಕೆಲ ಭಾಗ, ಎಪಿಎಸ್ ಬಟ್ಟೆ ಅಂಗಡಿ, ಸಾಕಮ್ಮಾಸ್ ಕಾಫಿಪುಡಿ ಮಳಿಗೆ, ಭಾರತ್ ಬೇಕರಿ ಸೇರಿದಂತೆ 72 ರಿಂದ 75ಕ್ಕೂ ಅಧಿಕ ಆಸ್ತಿಗಳ ಪೈಕಿ ಶೇಕಡ 30ರಿಂದ 40ರಷ್ಟು ತೆರವುಗೊಳಿಸುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ------

ಎರಡು ಪ್ರಮುಖ ರಸ್ತೆಗಳ ಅಗಲೀಕರಣದಿಂದ ಪಟ್ಟಣದ ಅಭಿವೃದ್ಧಿಗೆ ಪೂರಕ ವಾತಾವರಣವಾಗಲಿದೆ. ಈ ಹಿನ್ನೆಲೆ ಈಗಾಗಲೇ ಅಧಿಕಾರಿಗಳ ಸಭೆ ಕರೆದಿದ್ದು, ಅಂತಿಮ ಸಿದ್ಧತೆ ಕೈಗೊಳ್ಳಲಾಗುವುದು, ರಸ್ತೆ ಅಗಲೀಕರಣದಿಂದಾಗಿ ಪರಿಹಾರ ಹಾಗೂ ರಸ್ತೆ, ಚರಂಡಿ ಇನ್ನಿತರ ಅಭಿವೃದ್ಧಿಗಾಗಿ 80 ರಿಂದ 90 ಕೋಟಿಗೂ ಅಧಿಕ ಅನುದಾನ ಅಗತ್ಯವಿದ್ದು, ಈಗಾಗಲೇ ಸರ್ಕಾರಕ್ಕೆ ಅನುದಾನಕ್ಕೆ ಮನವಿ ಮಾಡಿದ್ದು, ಪ್ರಸ್ತಾವನೆ ಸಲ್ಲಿಸಲಾಗುವುದು.

- ಎ. ಆರ್. ಕೖಷ್ಣಮೂರ್ತಿ. ಕೊಳ್ಳೇಗಾಲ ಶಾಸಕ

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ