ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡ ಸಾಹಿತ್ಯ’ ಎಂಬ ವಿಷಯ ಕುರಿತು ಮಾತನಾಡಿದರು.
ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ಪ್ರಪಂಚದಲ್ಲಿಯೇ ವಿಶಿಷ್ಟವಾದದ್ದು, ನಮ್ಮ ಸ್ವಾತಂತ್ರ್ಯ ಚಳವಳಿ ಏಷ್ಯಾ ಮತ್ತು ಆಫ್ರಿಕಾದ ಅನೇಕ ರಾಷ್ಟ್ರಗಳ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ಮತ್ತು ಪ್ರೇರಣೆ ಒದಗಿಸಿದೆ. ಶಸ್ತ್ರಕ್ರಾಂತಿ ನಡೆಸದೇ ಸತ್ಯ ಮತ್ತು ಅಹಿಂಸೆಯ ಅಸ್ತ್ರ ಬಳಸಿ ಜಗತ್ತೇ ಬೆರಗಾಗುವ ರೀತಿಯಲ್ಲಿ ನಾವು ಸ್ವಾತಂತ್ರ್ಯ ಪಡೆದೆವು ಎಂದು ವಿವರಿಸಿದರು.ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಕೇವಲ ಬ್ರಿಟಿಷರಿಂದ ಅಧಿಕಾರ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಹೊಸ ನಾಗರಿಕತೆ ಮತ್ತು ಸಂಸ್ಕೃತಿಯ ನಿರ್ಮಾಣ, ಹೊಸ ಆಲೋಚನೆಯೊಂದಿಗೆ ಬದುಕನ್ನು ರೂಪಿಸುವುದು ಗುರಿಯಾಗಿತ್ತು. ಅಸ್ಪೃಶ್ಯತಾ ನಿವಾರಣೆ, ಸರ್ವಧರ್ಮ ಸಮ ಭಾವ, ಖಾದಿ ಮತ್ತು ಗ್ರಾಮೀಣ ಗುಡಿ ಕೈಗಾರಿಕೆ, ಸರಳ ಬದುಕು, ಜನಜೀವನದ ಪ್ರತಿ ಅಂಶದಲ್ಲಿಯೂ ವೈಜ್ಞಾನಿಕತೆ ಇತ್ಯಾದಿ ಮೌಲ್ಯಗಳನ್ನು ಮುಂದಿಟ್ಟಿತು. ವಾಟ್ಸಾಪ್ ವಿಶ್ವವಿದ್ಯಾನಿಲಯಗಳ ಸುಳ್ಳು ಪ್ರಚಾರಗಳಿಗೆ ವಿದ್ಯಾರ್ಥಿಗಳು ಕಿವಿ ಗೊಡದೇ ಸತ್ಯ ಅರಿಯುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸುಗಮ ಸಂಗೀತ ಗಾಯಕ ಸಿ.ಎಂ. ನರಸಿಂಹಮೂರ್ತಿ ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪವಿತ್ರಾ ಅವರು ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ರಾಜ್ ಮೇಹು ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡ ಪ್ರಾಧ್ಯಾಪಕಿ ಡಾ. ಜ್ಯೋತಿ ಸ್ವಾಗತಿಸಿದರೆ ಕೊನೆಯಲ್ಲಿ ಸಂಚಾಲಕರಾದ ಪ್ರೊ. ಎ. ಎಂ. ಶಿವಸ್ವಾಮಿ ಅವರು ವಂದಿಸಿದರು.