ಶಿರಹಟ್ಟಿ: ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದ ೨೯ ಹಳ್ಳಿಗಳ ಕುಡಿಯುವ ನೀರಿನ ಬರ ಹೋಗಲಾಡಿಸಲು ೨೯ ಕೆರೆಗಳಿಗೆ ೨ ಚೆಕ್ ಡ್ಯಾಂ ಭರ್ತಿಗೆ ರೂಪಿಸಿದ್ದ ೧೯೭.೫೦ ಕೋಟಿ ರು. ವೆಚ್ಚದ ಜಾಲವಾಡಗಿ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದ್ದು, ಶೀಘ್ರವಾಗಿ ಪ್ರಾರಂಭಿಸುವಂತೆ ಶಾಸಕ ಡಾ. ಚಂದ್ರು ಕೆ. ಲಮಾಣಿ ಅವರು ಮಂಗಳವಾರ ವಿಧಾನಸಭೆಯ ಮುಂಗಾರು ಅಧಿವೇಶನದ ಕಲಾಪದಲ್ಲಿ ಒತ್ತಾಯಿಸಿದರು. ಈ ಕುರಿತಂತೆ ವಿಧಾನ ಸಭೆಯ ಮುಂಗಾರು ಅಧಿವೇಶನದ ಕಲಾಪದಲ್ಲಿ ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿ, ನನೆಗುದಿಗೆ ಬಿದ್ದಿರುವ ಜಾಲವಾಡಗಿ ಏತ ನೀರಾವರಿ ಯೋಜನೆಯನ್ನು ಬೇಗ ಪ್ರಾರಂಭಿಸಿ ಈ ಭಾಗದ ಜನರ ಕುಡಿಯು ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗಮನ ಸೆಳೆದು ಸದನದಲ್ಲಿ ಉತ್ತರಿಸುವಂತೆ ಮನವಿ ಮಾಡಿದರು. ಶಿರಹಟ್ಟಿ, ಮುಂಡರಗಿ, ಗದಗ ತಾಲೂಕಿನ ೧೯ ಹಳ್ಳಿಯ ಕೆರೆಗಳು ಸೇರಿ ಒಟ್ಟು ೨೯ ಕೆರೆಗಳಿಗೆ ಮುಂಡರಗಿ ತಾಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಗೆ ನಿರ್ಮಿಸಲಾಗಿರುವ ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನ ಎಡಭಾಗದಲ್ಲಿ ಇರುವ ಹಮ್ಮಿಗಿ ಮತ್ತು ಕಡಕೋಳದಲ್ಲಿ ನೀರನ್ನು ಎತ್ತುವಳಿ ಮಾಡಲಾಗುತ್ತದೆ. ಜನರ ಅಗತ್ಯಕ್ಕೆ ಅನುಗುಣವಾಗಿ ೨೦೧೮-೧೯ರ ಅವಧಿಯಲ್ಲಿಯೇ ಯೋಜನೆ ಸಿದ್ಧಪಡಿಸಲಾಗಿದೆ. ೨೦೨೨ರಲ್ಲಿ ಯೋಜನೆ ಆರಂಭವಾಗಿದೆ. ೨೦೨೩ರಲ್ಲಿ ಅಡಿಗಲ್ಲು ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿಯೂ ಈ ವಿಷಯ ಚರ್ಚೆಯಾಗಿದೆ. ಶೀಘ್ರವೇ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಯೋಜನೆ ಅನುಷ್ಠಾನಗೊಳ್ಳಲು ಆಸಕ್ತಿ ತೋರಬೇಕು ಎಂದು ವಿನಂತಿಸಿದರು. ಶಿರಹಟ್ಟಿ ತಾಲೂಕು ಬಯಲುಸೀಮೆ, ಬರಗಾಲದ ನಾಡು ಎಂಬ ಹಣೆಪಟ್ಟಿ ಹೊತ್ತಿದ್ದು, ಈ ಮತಕ್ಷೇತ್ರದ ಕೃಷಿಕರು ನೀರಾವರಿ ಯೋಜನೆಯಿಂದ ವಂಚಿತರಾಗಿದ್ದಾರೆ. ಕ್ಷೇತ್ರವನ್ನು ಸದಾ ಹಚ್ಚ ಹರಿಸರಾಗಿಡಲು ಬಯಸಿ ಏತ ನೀರಾವರಿ, ಕೆರೆ ತುಂಬಿಸುವಂತಹ ಹಲವಾರು ಯೋಜನೆಗಳನ್ನು ಕೈಗೊಂಡರೂ ಅವುಗಳನ್ನು ಸಾಕಾರಗೊಳಿಸುವಲ್ಲಿ ಸರ್ಕಾರ ನಿಷ್ಕಾಳಜಿ ತೋರುತ್ತಿದೆ ಎಂಬ ಕೊರಗು ತಾಲೂಕಿನ ಜನರನ್ನು ಕಾಡುತ್ತಿದೆ. ಜಾಲವಾಡಗಿ ಏತ ನೀರಾವರಿ ಯೋಜನೆ ಕುರಿತಂತೆ ಕಳೆದ ಅಧಿವೇಶನದಲ್ಲೂ ಗಮನ ಸೆಳೆದಿದ್ದೇನೆ. ಅಂದು ನೀಡಿದ ಉತ್ತರವನ್ನೇ ಉಪ ಮುಖ್ಯಮಂತ್ರಿಗಳು ಮತ್ತೆ ನೀಡಿದ್ದಾರೆ ಎಂದು ಸಭಾಧ್ಯಕ್ಷರಾದ ಯು.ಟಿ. ಖಾದರ ಅವರ ಮುಂದೆಯೇ ಬೇಸರ ಹೊರ ಹಾಕಿ ನಮ್ಮ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಸದನದಲ್ಲಿ ಹಾಜರಿದ್ದು, ಆದಷ್ಟು ಬೇಗ ಯೋಜನೆ ಆರಂಭವಾಗಲಿ ಎಂದು ಮನವಿ ಮಾಡಿಕೊಂಡರು. ಜತೆಗೆ ಅಧಿಕಾರಿಗಳು ಈ ಯೋಜನೆ ಕುರಿತು ಇಚ್ಛಾಸಕ್ತಿ ತೋರುತ್ತಿಲ್ಲ ಎಂದರು.