ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿ ಬಳಿ ಇರುವ ಎಂಎಸ್‌ಜಿಪಿ ಕಸ ಘಟಕಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಿಂದ ಮಂಗಳವಾರ ಹೆಚ್ಚುವರಿ ಕಸದ ಲಾರಿ ಆಗಮನ ಹಿನ್ನಲೆ ಗ್ರಾಮಸ್ಥರು, ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ಕಸದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮಹದೇವಪುರ ಬಳಿ ಇರುವ ಕಸ ಸಂಸ್ಕರಣಾ ಘಟಕದಲ್ಲಿ ಸ್ಥಳೀಯರ ಪ್ರತಿಭಟನೆ, ವಿರೋಧದ ಹಿನ್ನಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ದೊಡ್ಡಬಳ್ಳಾಪುರ ತಾಲೂಕಿನ ಕಸ ವಿಲೇವಾರಿ ಘಟಕಕ್ಕೆ ಹೆಚ್ಚುವರಿಯಾಗಿ 400 ಕಸದ ಲಾರಿಗಳನ್ನು ಕಳುಹಿಸಲು ಪ್ರಯತ್ನಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕನ್ನು ಬಿಬಿಎಂಪಿಯ ಕಸದ ತೊಟ್ಟಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈಗಾಗಲೇ ಅವೈಜ್ಞಾನಿಕ ಕಸ ವಿಲೇವಾರಿ ಪರಿಣಾಮ ಎಂಎಸ್‌ಜಿಪಿ ಘಟಕದಲ್ಲಿ ಬೆಟ್ಟದೋಪಾದಿಯಲ್ಲಿ ಕಸ ಸಂಗ್ರಹವಾಗಿದೆ. ಇರುವ ಕಸವನ್ನೇ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಿರುವಾಗ ಬೇರೆ ಕಡೆ ಸುರಿಯಬೇಕಾದ ಕಸವನ್ನೂ ದೊಡ್ಡಬಳ್ಳಾಪುರಕ್ಕೆ ತಂದು ಸುರಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಸದ ಗಾಡಿಗಳನ್ನು ತಡೆದ ಶಾಸಕ ಧೀರಜ್ ಮುನಿರಾಜು, ಸರ್ಕಾರ, ಜಿಬಿಎ ಈ ವಿಚಾರದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಜನರ ಭಾವನೆಗಳು, ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿ ಕಸವನ್ನು ಘಟಕದಲ್ಲಿ ಸುರಿಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
17ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕಕ್ಕೆ ಕಸ ಸುರಿಯಲು ಬಂದ ಲಾರಿಗಳನ್ನು ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ತಡೆದು ಧರಣಿ ನಡೆಸಲಾಯಿತು.
ದೊಡ್ಡಬಳ್ಳಾಪುರ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕಕ್ಕೆ ಹೆಚ್ಚುವರಿ ಕಸ ಸುರಿಯಲು ಬಂದ 60ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.