ಕನ್ನಡಪ್ರಭ ವಾರ್ತೆ ಮಂಡ್ಯ
ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಮಧು ಜಿ.ಮಾದೇಗೌಡರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಡಿ.24ರಂದು ಷಷ್ಟ್ಯಬ್ಧಿ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗೂ ಅಭಿಮಾನಿ ಬಳಗದ ಬಸವರಾಜೇಗೌಡ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದಿಂದ ನಗರದ ಹೊರ ವಲಯದಲ್ಲಿನ ಎ & ಎ ಕನ್ವೆಂಷನ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.
ಶಾಸಕ ರವಿಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಅವರು ಮಧು ಜಿ.ಮಾದೇಗೌಡ ದಂಪತಿಯನ್ನು ಅಭಿನಂದಿಸುವರು. ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಭಾಗವಹಿಸುವರು. ಮಧು ಜಿ.ಮಾದೇಗೌಡ ಮತ್ತು ಬಿಂದು ಮಧು ಜಿ.ಮಾದೇಗೌಡ ಉಪಸ್ಥಿತರಿರುವರು ಎಂದು ವಿವರಿಸಿದರು.ಡಾ.ಜಿ.ಮಾದೇಗೌಡರ ಕುರಿತು ಡಾ.ಮ.ರಾಮಕೃಷ್ಣ ಅವರು ಹಿನ್ನೋಟ ನುಡಿಗಳನ್ನಾಡಲಿದ್ದಾರೆ. ಮಧು ಜಿ.ಮಾದೇಗೌಡ ಅವರ ಕುರಿತು ಡಾ.ಎಸ್.ಬಿ.ಶಂಕರಗೌಡ ಮುನ್ನೋಟದ ನುಡಿಗಳನ್ನು ನುಡಿವರು, ಮಧು ಜಿ.ಮಾದೇಗೌಡ ಅವರ ಜೀವನ ಮತ್ತು ಸಾಧನೆ ಕುರಿತು ಡಾ.ಕೆಂಪಮ್ಮ ಅವರು ರಚಿಸಿದ ಮಕರಂದ ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಗುವುದು ಎಂದರು.
ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮಧು ಜಿ.ಮಾದೇಗೌಡ ದಂಪತಿಗಳೂ ಗೌರವ ಸ್ವೀಕರಿಸಲಿದ್ದಾರೆ. ಸದರಿ ಕಾರ್ಯಕ್ರಮದ ನಿರ್ವಹಣೆಯನ್ನು ಶ್ವೇತಾ ಎಂ.ಯು. ನಡೆಸಿಕೊಡಲಿದ್ದಾರೆ. ಮಧು ಜಿ.ಮಾದೇಗೌಡರ ವಿಧಾನ ಪರಿಷತ್ ವ್ಯಾಪ್ತಿಯ ಜಿಲ್ಲೆಗಳಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 20 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.ಮಧು ಜಿ.ಮಾದೇಗೌಡರ ಹುಟ್ಟುಹಬ್ಬದ ಅಂಗವಾಗಿ ವಾರಪೂರ್ತಿ ಸಮಾಜಮುಖ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.26ರಂದು ಭಾರತೀನಗರದ ಭಾರತೀ ಕಾಲೇಜಿ (ಕಲ್ಲು ಕಟ್ಟಡದ ಒಳಾಂಗಣ)ನಲ್ಲಿ ಬೃಹತ್ ಉದ್ಯೋಗ ಮೇಳ, ಡಿ.24ರಂದು ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮದ್ದೂರು ಪುರಸಭೆ, ಆಸ್ಟರ್ ಜಿ.ಮಾದೇಗೌಡ ಹಾಸ್ಪಿಟಲ್, ಶಂಕರ್ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಡಿ.28 ಮತ್ತು 26ರಂದು ರಾಜ್ಯ ಮಟ್ಟದ ಮುಕ್ತ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಎಂ.ಜಿ.ಎಂ ಕಪ್ ಪಂದ್ಯಾವಳಿಯನ್ನು ಭಾರತೀನಗರದ ಭಾರೀ ಕ್ರೀಡಾಂಗಣದಲ್ಲಿ ಆಯೊಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನೆಲದನಿ ಸಂಘಟನೆಯ ರಮೇಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಸಂಘದ ರವೀಂದ್ರ, ಒಕ್ಕಲಿಗರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಕೃಷ್ಣ, ಎಸ್.ನಾರಾಯಣ್, ನಾಗರಾಜ್ ಸ್ವರೂಪ್ ಇದ್ದರು.