ಹಾನಗಲ್ಲ: ಕೇರಳದಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿ ತೀವ್ರ ಆತಂಕಕ್ಕೆ ಒಳಗಾಗಿದ್ದ ತಾಲೂಕಿನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ನೆರವಿಗೆ ಶಾಸಕ ಶ್ರೀನಿವಾಸ ಮಾನೆ ಸೂಚನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತರಳಿದ ಸದಸ್ಯರು, ಗಾಯಾಳುಗಳಿಗೆ ಧೈರ್ಯ ತುಂಬಿದರು.
ಕೇರಳದ ಕೊಟ್ಟಾಯಂನ ಏರುಮಲೈ ಬಳಿ ಬುಧವಾರ ನಸುಕಿನ ಜಾವ ಬಸ್ ಉರುಳಿಬಿದ್ದು ಕುರುಬರ ಸಂಘದ ಜಿಲ್ಲಾಧ್ಯಕ್ಷ, ಹಾನಗಲ್ ನಗರದ ಮಾರುತಿ ಹರಿಹರ ಸ್ಥಳದಲ್ಲೇ ಮೃತಪಟ್ಟು ಹಲವು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಗಾಯಗೊಂಡವರನ್ನು ಕೊಟ್ಟಾಯಂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿನ ಕಲ್ಲಹಕ್ಕಲ, ಕಮಾಟಗೇರಿ ಓಣಿಯ ಶಿವಮಣಿ ಅಯ್ಯಪ್ಪಸ್ವಾಮಿ ಸನ್ನಿಧಾನದಿಂದ ಮಾಲಾಧಾರಿಗಳು ಶಬರಿಮಲೈ ವಿಶ್ವಪೂಜೆ ದರ್ಶನಕ್ಕಾಗಿ ಯಾತ್ರೆ ಆರಂಭಿಸಿದ್ದರು. ಮಾರ್ಗ ಮಧ್ಯೆ ನಾನಾ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಶಬರಿಮಲೈಯತ್ತ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.ಅಪಘಾತದ ವಿಷಯ ತಿಳಿದ ತಕ್ಷಣವೇ ಶಾಸಕ ಶ್ರೀನಿವಾಸ ಮಾನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಸಂಪರ್ಕಿಸಿ ಘಟನೆ ಕುರಿತು ಮಾಹಿತಿ ನೀಡಿ ಕೇರಳ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪಾರ್ಥಿವ ಶರೀರ ತರಲು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಸಹ ಮಾಡಿದ್ದರು. ಅಲ್ಲದೇ ಐವರು ಮುಖಂಡರು, ಇಬ್ಬರು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಕೇರಳದ ಕೊಚ್ಚಿನ್‌ಗೆ ವಿಮಾನದ ಮೂಲಕ ಕಳುಹಿಸಿಕೊಟ್ಟಿದ್ದರು.
ಬುಧವಾರ ಸಂಜೆ ಹೊತ್ತಿಗೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದ ಟೀಂ ಆಪತ್ಬಾಂಧವ ರಸ್ತೆ ಮೂಲಕ ಪ್ರಯಾಣ ಮುಂದುವರೆಸಿ ಕೆಲ ಸಮಯದಲ್ಲಿಯೇ ಕೊಟ್ಟಾಯಂ ಜಿಲ್ಲಾಸ್ಪತ್ರೆ ತಲುಪಿದ ಬಳಿಕ ಗಾಯಾಳುಗಳು ನಿಟ್ಟುಸಿರು ಬಿಟ್ಟರು. ಭಾಷೆ ಗೊತ್ತಿಲ್ಲದ ಜಾಗದಲ್ಲಿ ಅಪಘಾತಕ್ಕೀಡಾಗಿ ತೀವ್ರ ಆತಂಕದಲ್ಲಿದ್ದ ಗಾಯಾಳುಗಳು ಟೀಂ ಆಪತ್ಬಾಂಧವದ ಸದಸ್ಯರನ್ನು ಕಂಡೊಡನೆ ಮಂದಹಾಸ ಬೀರಿದರು.ಬುಧವಾರ ರಾತ್ರಿ 11ಗಂಟೆ ಹೊತ್ತಿಗೆ ಮಾರುತಿ ಹರಿಹರ ಅವರ ಶವದ ಮರಣೋತ್ತರ ಪರೀಕ್ಷೆಯ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರತ್ಯೇಕ ಆ್ಯಂಬುಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಹಾನಗಲ್‌ಗೆ ತರುವ ವ್ಯವಸ್ಥೆ ಮಾಡಲಾಯಿತು. ಅಲ್ಲದೇ ಗಾಯಾಳುಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ ಕೊಟ್ಟಾಯಂನಿಂದ ಹಾನಗಲ್‌ನತ್ತ ಪ್ರಯಾಣ ಆರಂಭಿಸಲಾಯಿತು.
ಸಮಯ ಸ್ಪೂರ್ತಿ ಮೆರೆದು ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ದೌಡಾಯಿಸಿ ಸಂಕಷ್ಟಕ್ಕೀಡಾದವರ ನೆರವಿಗೆ ನಿಂತು ನಿಜವಾದ ಅರ್ಥದಲ್ಲಿ ಆಪತ್ಬಾಂಧವ ಎನಿಸಿದರು.ಶಾಸಕ ಶ್ರೀನಿವಾಸ ಮಾನೆ ಗಾಯಾಳುಗಳಿಗೆ ಸಕಾಲಿಕವಾಗಿ ಚಿಕಿತ್ಸೆ ದೊರಕಿಸಿ ಸ್ಥಳಕ್ಕೆ ತಂಡ ಕಳುಹಿಸಿ ಆತ್ಮಸ್ಥೆರ್ಯ ಮೂಡಿಸಿ, ಪಾರ್ಥಿವ ಶರೀರದ ಜತೆಗೆ ಎಲ್ಲ ಗಾಯಾಳುಗಳನ್ನು ಮರಳಿ ತವರಿಗೆ ಕರೆತರುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದು ಇಡೀ ರಾಜ್ಯದ ಗಮನ ಸೆಳೆದಿದೆ.
ಘಟನೆ ಮನಸ್ಸಿಗೆ ಬಹಳ ಬೇಸರ ತರಿಸಿದೆ. ಮೃತಪಟ್ಟ ಮಾರುತಿ ಹರಿಹರ ಅವರ ಪಾರ್ಥಿವ ಶರೀರ ತರಲು ಹಾಗೂ ಗಾಯಾಳುಗಳ ನೆರವಿಗೆ ಧಾವಿಸಲು ತಂಡವೊಂದನ್ನು ವಿಮಾನದ ಮೂಲಕ ಕೇರಳಕ್ಕೆ ಕಳುಹಿಸಲಾಗಿತ್ತು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.