ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡ ವಿದ್ಯಾರ್ಥಿಗಳು
ಕನ್ನಡಪ್ರಭ ವಾರ್ತೆ ಹಾನಗಲ್ಲ
ಅಗತ್ಯ ಮೂಲಸೌಕರ್ಯಗಳ ಕೊರತೆಯ ದೂರಿನ ಹಿನ್ನೆಲೆ ಇಲ್ಲಿನ ಪಾಳಾ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಶಾಸಕ ಶ್ರೀನಿವಾಸ ಮಾನೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಅಗತ್ಯ ಮಾಹಿತಿ ಪಡೆದರು.ಕಟ್ಟಡದಲ್ಲಿ ಉತ್ತಮ ಸೌಲಭ್ಯಗಳಿಲ್ಲ. ಮಳೆ ಬಂದರೆ ನೀರೆಲ್ಲ ಒಳ ಪ್ರವೇಶಿಸಿ ತೊಂದರೆ ಉಂಟಾಗುತ್ತದೆ. ವರ್ಗ ಕೊಠಡಿಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಕಲಿಕೆ ಪರಿಣಾಮಕಾರಿಯಾಗುತ್ತಿಲ್ಲ. ವರ್ಕ್ ಶಾಪ್‌ನಲ್ಲಿಯೂ ಸಹ ಸ್ಥಳಾವಕಾಶದ ಕೊರತೆ ಇದೆ. ಹಲವು ಯಂತ್ರಗಳು ದುರಸ್ತಿಗೀಡಾಗಿರುವುದರಿಂದ ಪ್ರಾಕ್ಟಿಕಲ್ ಕ್ಲಾಸ್‌ಗೆ ತೊಂದರೆ ಉಂಟಾಗಿದೆ. ಕೇಂದ್ರದಲ್ಲಿ ಒಟ್ಟು ೧೫೦ ವಿದ್ಯಾರ್ಥಿಗಳಿದ್ದೇವೆ. ಮುಖ್ಯಮಂತ್ರಿಗಳ ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯೂ ಅಲ್ಪಾವಧಿ ತರಬೇತಿಗೆ ಸಾಕಷ್ಟು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಶಾಸಕರ ಎದುರು ಅಳಲು ತೋಡಿಕೊಂಡರು.