ಕನ್ನಡಪ್ರಭ ವಾರ್ತೆ ಅರಕಲಗೂಡುತಾಲೂಕಿನ ಮಲ್ಲಿಪಟ್ಟಣ–ಕಟ್ಟೆಪುರ ಏತನೀರಾವರಿ ಯೋಜನೆ ಕಾಮಗಾರಿ ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರಪೇಟೆ ತಾಲೂಕಿನ ಕಟ್ಟೆಪುರ ಗಡಿಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.ಈ ವೇಳೆ ಮಾತನಾಡಿದ ಅವರು, ಕಾಮಗಾರಿ ಪ್ರಾರಂಭವಾದ 18 ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿದ್ದರೂ ಈಗಾಗಲೇ ಐದು ವರ್ಷಗಳಾದರೂ ಯೋಜನೆ ಮುಗಿಯದಿರುವುದು ವಿಷಾದಕರ ಸಂಗತಿ. ಆದರೆ ಕಳೆದ 5–6 ಸಭೆಗಳ ಪರಿಣಾಮವಾಗಿ ಈಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಉಳಿದ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕಾಲಮಿತಿಯ ಒಡಂಬಡಿಕೆ ಮಾಡಲಾಗಿದೆ ಎಂದು ತಿಳಿಸಿದರು. ಯೋಜನೆಯ ಒಟ್ಟು ಅಂದಾಜು ವೆಚ್ಚ ₹120 ಕೋಟಿ. ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಮೊದಲ ಹಂತಕ್ಕೆ ಸುಮಾರು ₹120 ಕೋಟಿ ವೆಚ್ಚವಾಗಿದೆ. ಎರಡನೇ ಹಂತ ಕಾಮಗಾರಿಯು 77 ಕೋಟಿ ರು. ವೆಚ್ಚದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಮಿಟಿಯಲ್ಲಿ ತೀರ್ಮಾನವಾಗಿದೆ. ಕ್ಯಾಬಿನೆಟ್ನಲ್ಲಿಟ್ಟು ಅಂತಿಮಗೊಳಿಸಬೇಕು ಎಂದರು. ಮೊದಲ ಹಂತದ ಯೋಜನೆಯಲ್ಲಿ ಒಟ್ಟು 4 ಮೋಟಾರ್‌ಗಳಿದ್ದು, ಪ್ರತಿಯೊಂದು 1300 HP ಸಾಮರ್ಥ್ಯ ಹೊಂದಿದೆ. ಸುಮಾರು 0.387 TMC ನೀರನ್ನು ಬಳಕೆ ಮಾಡುವ ಗುರಿ ಹೊಂದಲಾಗಿದೆ.