ಕನ್ನಡಪ್ರಭ ವಾರ್ತೆ ಸಕಲೇಶಪುರ
ಮಾರಣಾಂತಿಕ ಡೆಂಘೀ ತಡೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಮಂಗಳವಾರ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡೆಂಘೀ ಜ್ವರ ನಿಯಂತ್ರಣ ಕುರಿತ ಗ್ರಾ,ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿ, ಹ್ಯಾಂಡ್ ಬಿಲ್ ಹಂಚಿದರೆ ರೋಗ ತಡೆ ಸಾಧ್ಯವಿಲ್ಲ. ಗ್ರಾ.ಪಂ ಅಧಿಕಾರಿಗಳೆ ರೋಗ ಹರಡಬಹುದಾದ ಸ್ಥಳಗಳ ಪತ್ತೆ ಮಾಡಿ ಸ್ವಚ್ಛಗೊಳಿಸಿದರೆ ಸಾಧ್ಯವಾದಷ್ಟು ರೋಗ ತಡೆಗಟ್ಟಬಹುದು. ರೋಗ ಹತೋಟಿಗೆ ಬರುವವರಗೆ ಕಚೇರಿ ಬಿಟ್ಟು ಹೊರಗೆ ಕೆಲಸ ಮಾಡಬೇಕು. ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಅನಾಹುತ ನಡೆದರೆ ಸಂಬಂಧಪಟ್ಟ ಗ್ರಾ.ಪಂ ಅಧಿಕಾರಿಗಳ ತಲೆದಂಡ ನಿಶ್ಚಿತವಾಗಿದೆ. ಆದ್ದರಿಂದ, ರೋಗ ನಿಯಂತ್ರಣಕ್ಕೆ ಪ್ರಮಾಣಿಕವಾಗಿ ಕೆಲಸ ಮಾಡಿ ಎಂದರು.
ಕ್ರಮ ಕೈಗೊಳ್ಳಬೇಕು: ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಕೋಳಿ ಮಾಂಸದ ಅಂಗಡಿಗಳ ಮಾಲೀಕರು ಎಲ್ಲಿ ಬೇಕೆಂದರಲ್ಲಿ ಮಾಂಸದ ತ್ಯಾಜ್ಯಗಳನ್ನು ಬಿಸಾಡುತ್ತಿದ್ದು, ಇದರಿಂದ ಸಹ ಡೆಂಘೀ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾಂಸದ ತ್ಯಾಜ್ಯವನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಡುವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಳ್ಳುಪೇಟೆ ಗ್ರಾ.ಪಂ ಕಸವಿಲೇವಾರಿ ಘಟಕ ಗಬ್ಬೆದ್ದು ನಾರುತ್ತಿದ್ದು, ಇಲ್ಲಿಗೆ ಹೋಗುವ ಪ್ರತಿಯೊಬ್ಬರಿಗೂ ಡೆಂಘೀ ರೋಗ ತಗುಲುತ್ತಿದೆ. ತಾಲೂಕಿನ ಹಲವಾರು ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಇರುವ ಕಸ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಕೆಲವು ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕಗಳು ಇರುವುದಿಲ್ಲ. ಕೂಡಲೆ ಇದನ್ನು ತಾ.ಪಂ ಅಧಿಕಾರಿಗಳ ಗಮನಕ್ಕೆ ತಂದು ಕಸವಿಲೇವಾರಿ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಗ್ರಾ.ಪಂ ಅಧಿಕಾರಿ ಶೀಘ್ರವೆ ಕ್ರಮ ಕೈಗೊಳ್ಳಬೇಕು ಎಂದರು. ಡೆಂಘೀ ರೋಗ ನಿಯಂತ್ರಣಕ್ಕಾಗಿ ಕೆರೆಗಳಿಗೆ ಸೊಳ್ಳೆಗಳ ಲಾರ್ವಗಳನ್ನು ತಿನ್ನುವ ಗ್ಯಾಬೋಷಿಯ ಹಾಗೂ ಗಪ್ಪಿಸ್ ಮೀನುಗಳನ್ನು ಬಿಡಲಾಗಿದೆ. ಇದೇ ಮಾದರಿಯನ್ನು ಎಲ್ಲ ಗ್ರಾ.ಪಂಗಳ ಕೆರೆಗಳಿಗೂ ಬಿಡಬೇಕು ಎಂದರು. ಸಭೆಯಲ್ಲಿ ಮಾತನಾಡಿದ ಬಿರಡಹಳ್ಳಿ ಗ್ರಾ.ಪಂ ಅಧ್ಯಕ್ಷ ಎಸ್.ಡಿ ಸತೀಶ್, ಪಟ್ಟಣದಲ್ಲಿ ತ್ಯಾಜ್ಯ ರಾಶಿ ಸೃಷ್ಟಿಯಾಗಿದ್ದರೆ, ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬಸ್ ನಿಲ್ದಾಣದ ಶೌಚದ ನೀರು ಬಿಡಲಾಗುತ್ತಿದೆ. ಇದಲ್ಲದೆ ಹಲವೆಡೆ ಅಶುಚಿತ್ವ ತಾಂಡವವಾಡುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಜನವರಿಯಿಂದ ಕಾಡುತ್ತಿರುವ ಡೆಂಘೀ ಜುಲೈ ತಿಂಗಳು ಕಳೆದರೂ ಹತೋಟಿಗೆ ಬಾರದಾಗಿದೆ. ದಯವಿಟ್ಟು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.ಸಭೆಯಲ್ಲಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್, ತಾಲೂಕಿನಲ್ಲಿರುವ ೧೫ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಸಂಗ್ರಹಣೆ ಕೇಂದ್ರಗಳಿದ್ದು ಜ್ವರದ ಪ್ರಕರಣಗಳಲ್ಲಿ ವಿಳಂಬ ಮಾಡದೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ತಾಲೂಕಿನ ಸಾಕಷ್ಟು ಗ್ರಾ.ಪಂ ಕೇಂದ್ರಗಳಲ್ಲಿ ಆಸ್ಪತ್ರೆ ಕಟ್ಟಡಗಳಿದ್ದರೂ ಸಿಬ್ಬಂದಿ ಕೊರತೆಯಿಂದ ಬಹುತೇಕ ಎಲ್ಲ ಕಟ್ಟಡಗಳು ಪಾಳು ಬಿದ್ದಿವೆ. ಸದ್ಯ ಕೊರತೆ ಇರುವ ಸಿಬ್ಬಂದಿ ನೇಮಕವಾಗಬೇಕಿದೆ ಎಂದರು.
ಬಾಕ್ಸ್:ಯಸಳೂರು ಪಿಡಿಗೆ ಶಾಸಕರ ತರಾಟೆ:
ಇತ್ತೀಚೆಗಷ್ಟೆ ಯಸಳೂರು ಗ್ರಾ.ಪಂ ವ್ಯಾಪ್ತಿಯ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಮೃತ ಅರ್ಜುನ ಕಾಡಾನೆಯ ಸ್ಮಾರಕದ ಉದ್ಘಾಟನೆ ಸಮಾರಂಭದ ವೇಳೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಜರಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ಪಿಡಿಒ ಗೈರುಹಾಜರಾದ ಹಿನ್ನೆಲೆಯಲ್ಲಿ ಶಾಸಕರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡು ಶಿಸ್ತು ಕ್ರಮ ಕೈಗೊಳ್ಳುವಂತೆ ಜಿ.ಪಂ ಉಪ ಕಾರ್ಯದರ್ಶಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎಂ.ಕೆ ಶೃತಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ(ಆಡಳಿತ) ಕೃಷ್ಣಮೂರ್ತಿ, ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ರಾಮಕೃಷ್ಣ, ತಾ.ಸಹಾಯಕ ನಿರ್ದೇಶಕರಾದ ಆದಿತ್ಯ, ಹರೀಶ್ ಸೇರಿದಂತೆ ಗ್ರಾಪಂ ಪಿಡಿಒ, ಅಧ್ಯಕ್ಷರು ಉಪಸ್ಥಿತರಿದ್ದರು.