ಕನ್ನಡಪ್ರಭ ವಾರ್ತೆ ಅರಕಲಗೂಡು
ಇಡೀ ವಿಶ್ವದಲ್ಲಿಯೇ ನಮ್ಮ ರಾಜಧಾನಿ ಬೆಂಗಳೂರಿಗೆ ಇಂಥಾ ಹೆಸರು ಸಿಕ್ಕಿರುವುದು ನಾಡಪ್ರಭು ಕೆಂಪೇಗೌಡರ ದೂರದೃಷ್ಠಿ ಕೊಡುಗೆಯಿಂದ ಎಂದು ಶಾಸಕ ಎ.ಮಂಜು ಅವರು ತಿಳಿಸಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇವತ್ತು ಬೆಂಗಳೂರನ್ನು ಗ್ರೀನ್ ಸಿಟಿ, ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತಿದೆ. ಇಂದು ಕರ್ನಾಟಕ ರಾಜ್ಯದ ಕೀರ್ತಿ ಉನ್ನತ ಸ್ಥಾನಕ್ಕೇರಲು ಕೆಂಪೇಗೌಡರ ಕೊಡುಗೆ ಕಾರಣವಾಗಿದೆ ಎಂದರು. ದೇಶ, ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಮಹನೀಯರನ್ನು ನಿತ್ಯವೂ ಸ್ಮರಿಸುವ ಕೆಲಸ ಆಗಬೇಕಿದೆ. ನಮ್ಮ ಆದರ್ಶ ವ್ಯಕ್ತಿಗಳನ್ನು ಕೇವಲ ಪೂಜೆ, ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೇ ಅವರನ್ನು ಸರ್ವಜನಾಂಗದ ಆದರ್ಶ ವ್ಯಕ್ತಿಗಳನ್ನಾಗಿ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶಂಭುನಾಥ ಸ್ವಾಮೀಜಿ, ಸರ್ಕಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯನ್ನು ರೂಪಿಸಿ ನಮ್ಮ ನಾಡು ನುಡಿ, ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಮಹನೀಯರ ಜಯಂತಿ ಆಚರಣೆಯನ್ನು ಕೈಗೊಂಡಿರುವುದು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿಯೇ. ಇದನ್ನು ಅರ್ಥಮಾಡಿಕೊಂಡು ಎಲ್ಲಾ ಮಹನೀಯರ ಜಯಂತಿ ಆಚರಣೆಗಳಲ್ಲಿ ಸರ್ವರೂ ಭಾಗವಹಿಸಿ ಗೌರವ ಸಲ್ಲಿಸುವ ಮೂಲಕ ನಿತ್ಯ ಬದುಕಿನಲ್ಲಿ ಮಹಾಪುರುಷರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.ಕೆಂಪೇಗೌಡರು ಸಾಂಸ್ಕೃತಿಕ ವೈಭವದಲ್ಲಿ ನಾಡುಕಟ್ಟುವ ಕೆಲಸವನ್ನು ಮಾಡಿದ್ದಾರೆ. ಅದರ ಪ್ರಯೋಜನವನ್ನು ಇಂದು ಲಕ್ಷಾಂತರ ಮಂದಿ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಆಡಳಿತ ವ್ಯವಸ್ಥೆಯ ಕೇಂದ್ರ ಸ್ಥಾನವಾಗಿರುವ ಬೆಂಗಳೂರಿಗೆ ದೊಡ್ಡ ಹೆಸರು ಬರಲು ಪ್ರಮುಖ ಕಾರಣ ಕೆಂಪೇಗೌಡರು. ಈ ಸಲುವಾಗಿಯೇ ಅವರನ್ನು ನಮ್ಮ ನಾಡಪ್ರಭು ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯರಾದ ಕೃಷ್ಣಯ್ಯ, ರಶ್ಮಿ, ತಹಸೀಲ್ದಾರ್ ಸೌಮ್ಯ, ತಾಪಂ ಇಒ ಶ್ರೀನಿವಾಸ್, ಬಿಇಒ ನಾರಾಯಣ ,ಸಿಡಿಪಿಒ ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಗ್ರೇಡ್-2 ತಹಸೀಲ್ದಾರ್ ಸಿ.ಸ್ವಾಮಿ, ಅಕ್ಷರದಾಸೋಹ ಅಧಿಕಾರಿ ರಂಗಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು, ಕಂದಾಯ ಇಲಾಖೆ ಲೋಕೇಶ್, ಭಾಸ್ಕರ್, ಉಜ್ವಲ್ ಕುಮಾರ್ ಇತರರು ಉಪಸ್ಥಿತರಿದ್ದರು.