ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಟ್ಟಕಡೆಯ ಗ್ರಾಮವಾದ ಗಾಳಿಬೀಡು ಪಂಚಾಯತ್ ವ್ಯಾಪ್ತಿಯ ಕಡಮಕಲ್ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮದ ಸಂಕ್ಷಿಪ್ತ ವರದಿ ವಾರದ ಒಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಕಡಮಕಲ್ ನಿವಾಸಿಗಳೊಂದಿಗೆ ಕುಂದುಕೊರತೆ ಸಭೆ ನಡೆಸಿ ಜನರಿಂದ ಮಾಹಿತಿ ಪಡೆದ ಶಾಸಕರು ಮನೆ ಮತ್ತು ಜಮೀನಿನ ದಾಖಲೆಗಳು, ಕುಡಿಯುವ ನೀರು ಸರಬರಾಜು, ಟ್ಯಾಂಕ್ ನಿರ್ಮಾಣ, ವಿದ್ಯುತ್ ವ್ಯವಸ್ಥೆ ಉನ್ನತೀಕರಣ, ರಸ್ತೆ ನಿರ್ಮಾಣ, ಅರಣ್ಯ ಇಲಾಖೆ ಮತ್ತು ಗ್ರಾಮದ ಗಡಿ ಗೊಂದಲಗಳ ನಿವಾರಣೆ ಹಾಗೂ ಪಡಿತರ ವಿತರಣೆಯ ಬಗ್ಗೆ ಚರ್ಚೆ ಮಾಡಿ ನಿಯಮಾನುಸಾರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಡಾ.ಮಂತರ್ ಗೌಡ ಅವರು ನಿರ್ದೇಶನ ನೀಡಿದರು.ಕಡಮಕಲ್ ಗ್ರಾಮದಲ್ಲಿ 200 ಜನಸಂಖ್ಯೆ ಇದ್ದು, ಬಹುತೇಕ ಕೂಲಿ ಕಾರ್ಮಿಕರೆ ವಾಸಿಸುತ್ತಿದ್ದಾರೆ. ಸುಳ್ಯ ಮೂಲಕ 80 ಕಿ.ಮೀ ಕ್ರಮಿಸಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಬಂದು ಕೆಲಸ ಮಾಡಿಕೊಂಡು ಹೋಗುವುದು ಅಸಾಧ್ಯದ ಕೆಲಸವಾಗಿರುವುದರಿಂದ ಇಲ್ಲಿಯ ವರೆಗೆ ಯಾವುದೇ ಮೂಲಭೂತ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ.
ಆದ್ದರಿಂದ ಸರ್ಕಾರದ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಅದನ್ನು ಒಬ್ಬ ಜನಪ್ರತಿನಿಧಿಯಾಗಿ ತಾವು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಪ್ರಮುಖರಾದ ಎಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ವಲಯ ಅಧ್ಯಕ್ಷರಾದ ಸುಭಾಷ್ ಆಳ್ವ, ಪುಷ್ಪ ಪೂಣಚ್ಚ, ವಿ.ಜಿ.ಮೋಹನ್, ಕೋಚನ ಹರಿಪ್ರಸಾದ್, ಹಂಚೆಟ್ಟಿರ ಮನು ಮುದ್ದಪ್ಪ, ಅಪ್ರು ರವೀಂದ್ರ, ಕಿರಣ್, ರೋಷನ್ ಗಣಪತಿ, ಪ್ರಭು ರೈ, ರವಿಗೌಡ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಭೂಮಿಪೂಜೆ: ಸುಮಾರು 3.50 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಗೆ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಸರ್ಕಾರದ ಬದ್ಧತೆಯಾಗಿದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದರು.
ಕಾಮಗಾರಿ ಮುಕ್ತಾಯ: ಪ್ರಾಥಮಿಕ ಹಂತದಲ್ಲಿ 3.45 ಕಿ.ಮೀ. ವಿಸ್ತೀರ್ಣದ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈ ರಸ್ತೆಯ ಅಭಿವೃದ್ಧಿಗೆ ಹಲವು ವರ್ಷಗಳ ಬೇಡಿಕೆ ಇದೆ. ಪ್ರತಿ ಬಾರಿ ಇಲ್ಲಿಗೆ ಆಗಮಿಸಿದ ಸಂದರ್ಭ ಸ್ಥಳೀಯರು ಪ್ರಶ್ನಿಸುತ್ತಿದ್ದರು. ರಸ್ತೆ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಅಗತ್ಯ ಅನುದಾನ ನೀಡಿದೆ. ಮುಂದಿನ ಜನವರಿ-ಫೆಬ್ರವರಿ ವೇಳೆಗೆ ಉಳಿದ 3 ಕೋಟಿ ರು. ಅನುದಾನ ನೀಡಿ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದರು. ಕಡಮಕಲ್ಲು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಾನೂನು ತೊಡಕು ಇರುವ ಹಿನ್ನೆಲೆ ಕಾನೂನು ಅಡಿಯಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು. ಇಲ್ಲಿರುವ ಸೇತುವೆಯನ್ನು ಮುಂದಿನ ದಿನದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಕ್ಷೇತ್ರದ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಲೋಕೋಪಯೋಗಿ ಇಲಾಖೆ ಮೂಲಕ ಆರಂಭಗೊಂಡಿದೆ. ಪ್ರತಿಕೂಲ ಹವಾಮಾನದಿಂದ ರಸ್ತೆ ದುರಸ್ತಿ ಸಾಧ್ಯವಾಗಿರಲಿಲ್ಲ. ತ್ವರಿತವಾಗಿ ಗುಂಡಿ ಮುಚ್ಚುವ ಕೆಲಸ ಹಾಗೂ ರಸ್ತೆ ಅಭಿವೃದ್ಧಿ ಕೆಲಸ ಮಾಡಲಾಗುವುದು. ಗುಣಮಟ್ಟದಲ್ಲಿ ರಸ್ತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಪ್ರಮುಖರಾದ ಎಚ್.ಎ.ಹಂಸ, ಜಿಲ್ಲಾ ವಕ್ತಾರ ತೆನ್ನೀರ ಮೈನಾ, ತಾ.ಪಂ. ಮಾಜಿ ಸದಸ್ಯರಾದ ಡಾ.ಜಯಂತಿ ಶೆಟ್ಟಿ, ಪ್ರಮುಖರಾದ ಸುಭಾಷ್ ಆಳ್ವ, ಪುಷ್ಪಾ, ಪೂಣಚ್ಚ, ಅಪ್ರುರವೀಂದ್ರ, ಕೊಂಬಾರನ ಗಣಪತಿ, ರೋಶನ್, ಎ.ಎ.ಪೊನ್ನಪ್ಪ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಹರಿಪ್ರಸಾದ್ ಕೋಚನ ಇತರರು ಇದ್ದರು.