ಭೂ ದಾಖಲೆಗಳ ಇ ಖಜಾನೆ ಕಾರ್ಯಕ್ರಮಕ್ಕೆ ಶಾಸಕ ಮಂಥರ್ ಗೌಡ ಚಾಲನೆ

KannadaprabhaNewsNetwork |  
Published : Jan 07, 2025, 12:30 AM IST
ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಭೂ ದಾಖಲೆಗಳ ಇ ಖಜಾನೆ ಕಾರ್ಯಕ್ರಮಕ್ಕೆ ಶಾಸಕ ಮಂಥರ್ ಗೌಡ ಚಾಲನೆ | Kannada Prabha

ಸಾರಾಂಶ

ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕಿನ ಭೂ ದಾಖಲೆಗಳ ಇ ಖಜಾನೆ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್‌ ಗೌಡ ಚಾಲನೆ ನೀಡಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ನೂತನವಾಗಿ ರಾಜ್ಯಾದ್ಯಂತ ಕೈಗೊಳ್ಳಲಾಗಿರುವ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮದ ಅಂಗವಾಗಿ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕಿನ ಭೂ ದಾಖಲೆಗಳ ಇ ಖಜಾನೆ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಸೋಮವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಕಾಲ ಶೀತ ಹವಾಮಾನ ಇರುವುದರಿಂದ ಕಾಗದದಲ್ಲಿರುವ ಭೂ ದಾಖಲೆಗಳು ನಾಶವಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಚಾಲನೆ ನೀಡಿದೆ. ನಮ್ಮ ರಾಜ್ಯದ ಸಾಕಷ್ಟು ಭೂ ದಾಖಲೆಗಳು ಇಂದಿಗೂ ತಮಿಳುನಾಡಿನಲ್ಲಿ ಸೇರಿವೆ. ನಮ್ಮ ತಾಲೂಕಿನಲ್ಲಿ 100 ಕೋಟಿಗೂ ಹೆಚ್ಚಿನ ದಾಖಲೆಗಳನ್ನು ಡಿಜಿಲೀಕರಣ ಮಾಡಬೇಕಿದೆ. ಇದರಿಂದ ನಮ್ಮ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ಮತ್ತು ದಾಖಲೆಗಳನ್ನು ತಿದ್ದುವುದು, ಕಳವು ಮಾಡುವುದನ್ನು ತಪ್ಪಿಸಲು ಅವಕಾಶವಾಗುವುದು ಎಂದರು.

ಕಚೇರಿ ಸಿಬ್ಬಂದಿ ಜಾಗ್ರತೆಯಿಂದ ದಾಖಲಾತಿಯನ್ನು ಡಿಜಿಲೀಕರಣ ಮಾಡಬೇಕು. ಯಾರು ಮೊದಲು ಬಂದಿರುವ ರೈತರ ದಾಖಲೆಗಳನ್ನು ಮೊದಲು ನೋಂದಣಿ ಮಾಡಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸೋಮವಾರಪೇಟೆ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮಾತನಾಡಿ, ಕಂದಾಯ ಇಲಾಖೆಯಲ್ಲಿನ ಎಲ್ಲ ದಾಖಲಾತಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಮುಖ ಯೋಜನೆಯನ್ನು ರಾಜ್ಯದಾದ್ಯಂತ ಹಮ್ಮಿಕೊಂಡಿದೆ. ಈ ಯೋಜನೆಯಿಂದ ಎಲ್ಲ ದಾಖಲಾತಿಗಳನ್ನು ರಕ್ಷಿಸುವುದರೊಂದಿಗೆ, ರೈತರಿಗೆ ತಕ್ಷಣ ದಾಖಲಾತಿ ನೀಡಲು ಅವಕಾಶವಾಗುವುದು. ಕಳೆದ ಒಂದು ವಾರದ ಹಿಂದಿನಿಂದಲೇ 7 ಸಾವಿರ ದಾಖಲಾತಿಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಶೀಘ್ರದಲ್ಲಿಯೇ ಎಲ್ಲ ದಾಖಲಾತಿ ಡಿಜಿಟಲೀಕರಣ ಮಾಡಿ, ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭ ತಾಲೂಕು ಕಚೇರಿಯ ಆಹಾರ ಶಾಖೆಗೆ, ಹಾಗೂ ಭೂ ದಾಖಲೆಗಳ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಈ ಸಂದರ್ಭ ಕುಶಾಲನಗರ ತಾಲೂಕಿನ ತಹಸೀಲ್ದಾರ್ ಕಿರಣ್ ಗೌರಯ್ಯ, ಎಡಿಎಲ್‌ಆರ್ ಪರಮೇಶ್ ಮತ್ತಿತರರು ಇದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’