ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಚ್.ವೈ.ಮೇಟಿಯವರ ಅಂತ್ಯಕ್ರಿಯೆಯಲ್ಲಿ ಬುಧವಾರ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಟಿಯವರು ಈ ಸಂದರ್ಭದಲ್ಲಿ ಇಲ್ಲದಿರುವುದು ವಿಷಾದನೀಯ. ಅವರ ಆಸೆಯಂತೆ ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸಲಾಗುವುದು. ಟೆಂಡರ್ ಕೂಡ ಈಗಾಗಲೇ ಕರೆಯಲಾಗಿದೆ. ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
1983ರಿಂದ ಮೇಟಿಯವರೊಂದಿಗೆ ಒಡನಾಡವಿತ್ತು. ನಾನು ಜನತಾ ಪಕ್ಷ, ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ ನಾನು ಕೈಗೊಳ್ಳುವ ತೀರ್ಮಾನಗಳಿಗೆ ಬದ್ಧರಾಗಿದ್ದರು. ಅಹಿಂದ ಸಂಘಟನೆಯಲ್ಲಿ ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು. ಅಧಿಕಾರ ಶಾಶ್ವತವಾದುದಲ್ಲ. ಜನರಿಂದ ದೊರಕುವ ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಬೇಕು. ಬಹಳ ವಿದ್ಯಾವಂತರಲ್ಲದಿದ್ದರೂ, ರಾಜಕೀಯ ತತ್ವಗಳನ್ನು ತಪ್ಪದೇ ಪಾಲಿಸುತ್ತಿದ್ದರು. ಜನರೊಂದಿಗೆ ಬೆರೆಯುವ ಗುಣವಿದ್ದ ಮೇಟಿಯವರು ಕುರುಬ ಸಮುದಾಯದವರಾಗಿದ್ದರೂ, ಜಾತ್ಯಾತೀತ ತತ್ವದ ಪಾಲಕರಾಗಿದ್ದರು. ಎಲ್ಲ ಜಾತಿಧರ್ಮಗಳನ್ನು ಪ್ರೀತಿಯಿಂದ ಕಾಣುವ ಸ್ವಭಾವದವರಾಗಿದ್ದರು ಎಂದು ಬಣ್ಣಿಸಿದರು.ಜನಾನುರಾಗಿದ್ರೆ ಮಾತ್ರ ಗೆಲ್ಲಲು ಸಾಧ್ಯ:
ಅವರ ಜನಪ್ರಿಯತೆ ಎಷ್ಟರ ಮಟ್ಟಿಗಿತ್ತೆಂದರೆ ಬಾಗಲಕೋಟೆಯಲ್ಲಿ ಒಬ್ಬ ಕುರುಬ ಸಮುದಾಯದವರು ಗೆಲ್ಲುವುದು ಸುಲಭದ ಮಾತಲ್ಲ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಅವರಲ್ಲಿತ್ತು. ಸಂಭಾವಿತ ರಾಜಕಾರಣಿ ಎಂದರೆ ಅತಿಶಯೋಕ್ತಿಯಲ್ಲ ಎಂದರು. ವೈರಿಗಳೊಂದಿಗೂ ಚೆನ್ನಾಗಿರುತ್ತಿದ್ದ ವಿಶಿಷ್ಟ ಗುಣಗಳಿದ್ದ ರಾಜಕಾರಣಿಯಾಗಿದ್ದರು. ಪಂಚಾಯತಿ ಹಾಗೂ ಎಪಿಎಂಸಿ ಅಧ್ಯಕ್ಷರಾಗಿ, ಸಚಿವ ಸ್ಥಾನವನ್ನು ಅಲಂಕರಿಸುವುದು ಸುಲಭದ ಮಾತಲ್ಲ. ಹಂತ ಹಂತವಾಗಿ ಮಟಟ್ಟಿಲುಗಳನ್ನು ಏರಿಕೊಂಡು ಬೆಳೆದವರು ಎಂದರು.
ಈ ಬಾರಿ ಮುಖ್ಯಮಂತ್ರಿಯಾದ ಮೇಲೆ ನನ್ನ ಬಳಿ ಅಪರೂಪಕ್ಕೆ ಬರುತ್ತಿದ್ದರು. ರಾಜಕೀಯ ಕ್ಷೇತ್ರಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ. ನನ್ನ ಅನುಯಾಯಿಗಳಲ್ಲಿ ಮೇಟಿ ಅಗ್ರಗಣ್ಯರು. ಸರಳ ಸಜ್ಜನಿಕೆಯ ವ್ಯಕ್ತಿ. ಆಸೆ, ದುರಾಸೆಗಳಿದ್ದ ವ್ಯಕ್ತಿಯಾಗಿರಲಿಲ್ಲ. ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಇವರ ಸಾವಿನಿಂದ ಬಡವಾಗಿದೆ ಎಂದು ಮುಖ್ಯಮಂತ್ರಿಗಳು ವಿಷಾದಿಸಿದರು.