ಹಾನಗಲ್ಲ: ಪುರಸಭೆ ಸದಸ್ಯತ್ವದ ಅಂತ್ಯದ ಕ್ಷಣ ಗಣನೆಯಲ್ಲಿರುವ ಹಾನಗಲ್ಲ ಪುರಸಭೆ ಅಧ್ಯಕ್ಷರು-ಉಪಾಧ್ಯಕ್ಷರು ಸದಸ್ಯರು ಉಭಯ ಕುಶಲೋಪರಿ ಜತೆಗೆ ಅನುಭವಗಳನ್ನು ಹಂಚಿಕೊಂಡು ಸದ್ದು-ಗದ್ದಲವಿಲ್ಲದೇ, ಕೊನೆಯ ಸರ್ವ ಸಾಧಾರಣ ಸಭೆಗೆ ವಿದಾಯ ಹೇಳಿದರು.
ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ರು. ಅನುದಾನ ಬೇಕು. ಆದರೆ ಲಭ್ಯವಿರುವಷ್ಟೇ ಅನುದಾನದಲ್ಲಿ ಕುಡಿಯುವ ನೀರು, ಬೀದಿದೀಪ, ಸ್ವಚ್ಛತೆಗೆ ಆದ್ಯತೆ ನೀಡಿ, ಕೆಲಸ ಮಾಡಿದ್ದೇವೆ. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಮ್ಮ ಅವಧಿಯಲ್ಲಿ ಆರಂಭವಾಗಿದ್ದು, ಅತಿ ಶೀಘ್ರ ಪಟ್ಟಣದ ನಾಗರಿಕರಿಗೆ ನಿತ್ಯ ಕುಡಿಯುವ ನೀರು ಒದಗಿಸುತ್ತೇವೆ ಎಂದರು.
ಹಿರಿಯ ಪುರಸಭಾ ಸದಸ್ಯೆ ಹಸಿನಾಬಿ ನಾಯ್ಕನವರ ಅಭಿನಂದನಾಪರ ಮಾತನಾಡಿ, ಪಟ್ಟಣದ ರಸ್ತೆಗಳು ಗುಂಡಿಮಯವಾಗಿವೆ. ವಾಹನ ದಟ್ಟಣೆ ಹೆಚ್ಚಿದೆ. ವಾಹನಗಳ ನಿಲುಗಡೆಗೆ ಸರಿಯಾದ ಅವಕಾಶಗಳಿಲ್ಲ. ಪಟ್ಟಣವನ್ನು ಸುಂದರ ನಗರ ಮಾಡುವುದು ಮಾತಾಯಿತೇ ಹೊರತೂ ಕೈಗೂಡಲಿಲ್ಲ. ಪುಟ್‌ಪಾತ್ ಪಾದಚಾರಿಗಳಿಗೆ ಲಭ್ಯವಿಲ್ಲದಂತಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ತೃಪ್ತಿಕರವಾಗಿಲ್ಲ ಎಂದರು.ಬೀದಿನಾಯಿಗಳು ಹಿಂಡು-ಹಿಂಡಾಗಿ ಕಂಡ ಕಂಡವರ ಮೇಲೆ ಎರಗುತ್ತಿವೆ. ಹಂದಿಗಳು ತಂಡ-ತಂಡವಾಗಿ ಇಡೀ ಪಟ್ಟಣದ ಸ್ವಾಸ್ಥ್ಯ ಹಾಳು ಮಾಡಿವೆ. ಬಿಡಾಡಿ ದನಗಳು ರಸ್ತೆಯಲ್ಲೇ ಮಲಗಿ ವಾಹನ ಚಾಲಕರಿಗೆ ಆತಂಕ ಸೃಷ್ಟಿಸುತ್ತಿವೆ. ಮಂಗಗಳ ಕಾಟವಂತೂ ಪಟ್ಟಣದ ಜನತೆಗೆ ಬೇಸರ ತಂದಿದೆ. ಈ ಸಮಸ್ಯೆಗಳಿಗೆ ಪರಿಹಾರ ಯಾವಾಗ ಎಂದು ಸದಸ್ಯರು ಮುಖ್ಯಾಧಿಕಾರಿ ವೈ.ಕೆ. ಜಗದೀಶ್ ಅವರನ್ನು ಪ್ರಶ್ನಿಸಿದರು. ಆದರೆ ಜಗದೀಶ ನಗುನಗುತ್ತಲೇ ಶೀಘ್ರ ಪರಿಹಾರ ಒದಗಿಸುತ್ತೇವೆ ಎಂದು ಚುಟುಕಾಗಿ ಉತ್ತರಿಸಿದರು.
ಪುರಸಭೆ ವಾಹನಗಳನ್ನು ಸರಿಯಾಗಿ ಬಳಸಿಕೊಳ್ಳದೇ ಬಾಡಿಗೆ ವಾಹನಗಳತ್ತ ಮುಖ ಮಾಡುವುದೇ ಪುರಸಭೆಗೆ ರೂಢಿಯಾಗಿದೆ ಎಂದು ಸದಸ್ಯ ಪರಶುರಾಮ ಖಂಡೂನವರ ಆಕ್ರೋಶ ವ್ಯಕ್ತಪಡಿಸಿದರು.ಹಾನಗಲ್ಲಿನ ತುರುಮಂದಿ ಬಳಿ ಬಸ್ ಶೆಲ್ಟರ್ ಮಾಡಿ ಕೊಡಿ ಎಂದು ಸದಸ್ಯೆ ಶಂಶಿಯಾಬಾನು ಬಾಳೂರ ಮನವಿ ಮಾಡಿದರು. ಪಟ್ಟಣದ ವ್ಯಾಪ್ತಿಯ ಆಸ್ತಿಗಳ ಪೋಡಿ ಹಾಗೂ ಖಾತಾ ಬದಲಾವಣೆಗೆ ಪುರಸಭೆ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯ ಖುರ್ಷಿದ್ ಅಹ್ಮದ ಹುಲ್ಲತ್ತಿ ಒತ್ತಾಯಿಸಿದರು.
ಸದಸ್ಯ ಮಹೇಶ ಪವಾಡಿ ಮಾತನಾಡಿ, ಪಟ್ಟಣದ ಫುಟ್‌ಪಾತ್‌ಗಳ ಮೇಲಿರುವ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿ. ಮಹಾತ್ಮಾಗಾಂಧಿ ವೃತ್ತ ಕಾನೂನು ಸುವ್ಯವಸ್ಥೆಗಳಿಲ್ಲದೇ ಸಮಸ್ಯೆಯ ಗೂಡಾಗಿದೆ. ವಾಹನ ನಿಲುಗಡೆಗೆ ತಡೆ ಹಾಕಿ, ರಸ್ತೆಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿ. ಇಲ್ಲಿಯೇ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ವೃತ್ತದ ಸೌಂದರ್ಯ ಹಾಗೂ ಸ್ವಚ್ಛತೆಗೆ ಗಮನ ಕೊಡಿ ಎಂದರು.ಪಟ್ಟಣದ ಕುಮಾರೇಶ್ವರ ಶ್ರೀಮಠದ ಎದುರಿನ ವೃತ್ತಕ್ಕೆ ಲಿಂ.ಕುಮಾರ ಶಿವಯೋಗಿಗಳ ಹೆಸರು ಹಾಗೂ ಬಸ್ ಡಿಪೋ ಬಳಿಯಿರುವ ಪಾಳಾ-ಹುಬ್ಬಳ್ಳಿ ರಸ್ತೆ ವೃತ್ತಕ್ಕೆ ಪಂ. ಪಂಚಾಕ್ಷರ ಗವಾಯಿಗಳವರ ನಾಮಕರಣ ಮಾಡಲು ಸಭೆ ಒಕ್ಕೊರಲಿನಿಂದ ಅನುಮೋದಿಸಿತು.
ಸದಸ್ಯರಾದ ಜಮೀರ ಶೇಖ, ನಾಗಪ್ಪ ಸವದತ್ತಿ, ನಾಶಿರಾ ಬಡಗಿ, ಸುನಕವ್ವ ಚಿಕ್ಕಣ್ಣನವರ, ರಶಿದಾಬಿ ನಾಯ್ಕನವರ, ವಿರೂಪಾಕ್ಷಪ್ಪ ಕಡಬಗೇರಿ, ಶೋಭಾ ಉಗ್ರಣ್ಣನವರ, ಎಸ್.ಕೆ. ಪೀರಜಾದೆ, ಮಮತಾ ಆರೇಗೊಪ್ಪ ಹಾಗೂ ನಾಮನಿರ್ದೇಶಿತ ಸದಸ್ಯರಾದ ಸುರೇಶ ನಾಗಣ್ಣನವರ, ಗೌಸಮೋದಿನ್ ತೊಂಡೂರ, ಮೇಕಾಜಿ ಕಲಾಲ, ಅಬ್ದುಲ್ ಗನಿ ಪಾಳಾ ಮಾತನಾಡಿದರು. ಮುಖ್ಯಾಧಿಕಾರಿ ವೈ.ಕೆ. ಜಗದೀಶ್ ಸ್ವಾಗತಿಸಿದರು.