ಹರಪನಹಳ್ಳಿ ಪುರಸಭೆ ಆಡಳಿತಾಧಿಕಾರಿ ನೇಮಕಕ್ಕೆ ಹೈಕೋರ್ಟ್ ತಡೆ

KannadaprabhaNewsNetwork |  
Published : Nov 06, 2025, 02:45 AM IST
1)-5ಎಚ್‌ ಆರ್‌ ಪಿ 1 - ಹರಪನಹಳ್ಳಿ ಪುರಸಭಾ ಕಚೇರಿಯ ನೋಟ 2)-5ಎಚ್‌ ಆರ್‌ ಪಿ 2 - ಟಿ.ವೆಂಕಟೇಶ (ಕೋಟ್‌ ಗೆ) 3)- 5ಎಚ್‌ ಆರ್‌ ಪಿ 3 - ರೇಣುಕಾ ದೇಸಾಯಿ (ಕೋಟ್‌ ಗೆ )  | Kannada Prabha

ಸಾರಾಂಶ

ಪುರಸಭೆ ಎರಡನೇ ಅವಧಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಒಂದು ವರ್ಷ ಅಧಿಕಾರ ಲಭಿಸಿದೆ. ಉಳಿ ದ ಒಂದೂವರೆ ವರ್ಷ ಆಡಳಿತಾಧಿಕಾರಿ ನೇಮಕವಾಗಿದ್ದು, ಇದರಿಂದ ಅನ್ಯಾಯವಾಗಿದೆ ಎಂದು ಸದಸ್ಯರಿಂದ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಇಲ್ಲಿಯ ಪುರಸಭಾ ಆಡಳಿತ ಮಂಡಳಿಯ ಅಧಿಕಾರಾವಧಿ ನ. 7ಕ್ಕೆ ಪೂರ್ಣಗೊಳ್ಳಲಿದೆ. ಆದರೆ, ನಾವು ಐದು ವರ್ಷ ಪೂರೈಸಿಲ್ಲ, ಹೀಗಾಗಿ ಅಧಿಕಾರಾವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಸ್ಥಳೀಯ ಪುರಸಭಾ ಸದಸ್ಯರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್ ಪೀಠ ಆಡಳಿತಾಧಿಕಾರಿ ನೇಮಕ್ಕೆ ತಾತ್ಕಾಲಿಕ ತಡೆ ನೀಡಿ ವಿಚಾರಣೆ ಮುಂದೂಡಿದೆ.

ಪುರಸಭಾ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಅವಧಿಗೆ ನ. 7, 2020ರಿಂದ ಜೂನ್‌ 5, 2022 ರ ವರೆಗೆ ಮಂಜುನಾಥ ಇಜಂತಕರ್‌ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ನಂತರ ಉಳಿದ ಅವಧಿಗೆ ಎಚ್.ಎಂ. ಅಶೋಕ ಅವರು ಜುಲೈ 8, 2022ರಿಂದ ಜೂನ್‌ 6, 2023ರ ವರೆಗೆ ಸೇವೆ ಸಲ್ಲಿಸಿದಾಗ ಅಲ್ಲಿಗೆ ಎರಡೂವರೆ ವರ್ಷದ ಮೊದಲ ಅವಧಿ ಪೂರ್ಣಗೊಂಡಿತು.

ಮೀಸಲಾತಿ ಬದಲಾವಣೆಯಾಗಿ ಎರಡನೇ ಅವಧಿಯ ಎರಡೂವರೆ ವರ್ಷ ಅಧಿಕಾರ ಅಧ್ಯಕ್ಷರು ಮತ್ತು ಕೌನ್ಸೆಲರ್‌ ಗಳಿಗೆ ಸಿಗಬೇಕಾಗಿತ್ತು, ಆದರೆ, ಜೂನ್‌ 17, 2023ರಿಂದ ಫೆ. 17, 2024ರ ವರೆಗೆ ಅಂದಿನ ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ತದ ನಂತರ ಫೆ. 19, 2024ರಿಂದ ನ. 11, 2024ರ ವರೆಗೆ ಈಗಿನ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಅಂತಿಮವಾಗಿ ನ. 11,-2024ರಿಂದ ನ. 7, 2025ರ ವರೆಗೆ ಎಂ. ಪಾತೀಮಾಭೀ ಹಾಗೂ ಉಪಾಧ್ಯಕ್ಷರಾಗಿ ಎಚ್. ಕೊಟ್ರೇಶ ಅವರು ಸೇವೆ ಸಲ್ಲಿಸಿದರು. ಹೀಗಿರುವಾಗ, ಸದಸ್ಯರು ಕೇಳುವ ಪ್ರಶ್ನೆ ಎಂದರೆ ನಮ್ಮನ್ನು ಜನತೆ ಗೆಲ್ಲಿಸಿರುವುದು 5 ವರ್ಷಕ್ಕೆ. ಮೊದಲ ಅವಧಿ ಎರಡೂವರೆ ವರ್ಷ ಸಿಕ್ಕಿದೆ. ಆದರೆ, ಎರಡನೇ ಅವಧಿಗೆ ಎರಡೂವರೆ ವರ್ಷದ ಬದಲು ಕೇವಲ ಒಂದು ವರ್ಷ ಸಿಕ್ಕಿದ್ದು, ನಮಗೆ ಅನ್ಯಾಯವಾಗಿದೆ.

ಆದ್ದರಿಂದ ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಭೀ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಸದಸ್ಯರಾದ ಡಿ. ಅಬ್ದುಲ್‌ ರಹಿಮಾನ್, ಲಾಟಿ ದಾದಾಪೀರ ಧಾರವಾಡ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಎರಡನೇ ಅವಧಿಯಲ್ಲಿನ ಆಡಳಿತಾಧಿಕಾರಿಗಳು ನಡೆಸಿದ ಅಧಿಕಾರಾವಧಿಯ ಅಂದರೆ ಸುಮಾರು 16 ತಿಂಗಳ ಅವಧಿಯನ್ನು ಸರಿದೂಗಿಸಿ 5 ವರ್ಷ ಪೂರೈಸಲು ಅವಕಾಶ ಮಾಡಿಕೊಡಿ ಎಂದು ಕೋರಿದ್ದಾರೆ.

ಹೈಕೋರ್ಟ್‌ ಅರ್ಜಿ ವಿಚಾರಣೆಗೆ ಅಂಗೀಕರಿಸಿ ನ. 7ರಿಂದ ನೇಮಕವಾಗಬೇಕಿದ್ದ ಆಡಳಿತಾಧಿಕಾರಿ ನೇಮಕ ಮಾಡದಂತೆ ತಡೆಯಾಜ್ಞೆ ನೀಡಿದೆ. ಸದ್ಯ ಪುರಸಭೆಗೆ ಆಡಳಿತಾಧಿಕಾರಿ ನೇಮಕವಾಗುವುದಿಲ್ಲ.ಅವಕಾಶ ಸಿಗಬಹುದು

ಎರಡನೇ ಅವಧಿಯಲ್ಲಿ ನಮಗೆ 30 ತಿಂಗಳು ಸಿಗಬೇಕಾಗಿತ್ತು. ಆದರೆ ಕೇವಲ ಸುಮಾರು 1 ವರ್ಷ ಸಿಕ್ಕಿದೆ. ಆದ್ದರಿಂದ ಆಡಳಿತಾಧಿಕಾರಿಗಳ ಅವಧಿಯ 16 ತಿಂಗಳು ನಮಗೆ ನೀಡಬೇಕು ಎಂದು ಹೈಕೋರ್ಟಿಗೆ ಮನವಿ ಮಾಡಿದ್ದೇವೆ. ಸದ್ಯ ಆಡಳಿತಾಧಿಕಾರಿಗಳ ನೇಮಕಕ್ಕೆ ಕೋರ್ಟ್‌ ತಡೆ ನೀಡಿದೆ, ಎರಡನೇ ಅವಧಿಯ 30 ತಿಂಗಳು ಪೂರ್ಣ ಗೊಳಿಸಲು ನಮಗೆ ಅವಕಾಶ ಸಿಗಬಹುದು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಡಿಸಿಗೆ ರವಾನೆ

ನನಗೆ ಹೈಕೋರ್ಟಿನ ಆದೇಶ ಪ್ರತಿಯನ್ನು ನ. 5ರಂದು ನೀಡಿದ್ದಾರೆ. ಇದನ್ನು ಜಿಲ್ಲಾಧಿಕಾರಿಗೆ ಕಳಿಹಿಸುತ್ತೇನೆ. ಡಿಸಿ ಅವರಿಂದ ಏನು ಸೂಚನೆ ಬರುತ್ತದೆಯೋ ಆ ಪ್ರಕಾರ ನಡೆಯುತ್ತೇನೆ ಎಂದು ಪುರಸಭಾ ಮುಖ್ಯಾಧಿಕಾರಿ

ರೇಣುಕಾ ಎಸ್. ದೇಸಾಯಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ