ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕಿತ್ತು: ಕಾಗೇರಿ

KannadaprabhaNewsNetwork |  
Published : Nov 06, 2025, 02:45 AM IST
ತಾಲೂಕಿನಲ್ಲಿ ನಡೆದ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಸಂಸದ ಕಾಗೇರಿ ಅವರು ಮಾತನಾಡಿದರು. | Kannada Prabha

ಸಾರಾಂಶ

ವಂದೇ ಮಾತರಂ ಗೀತೆಗೂ ಈಗ 150ನೇ ವರ್ಷಾಚರಣೆ ನಡೆಯುತ್ತಿದೆ. ವಂದೇ ಮಾತರಂ ಗೀತೆ ರಾಷ್ಟ್ರವನ್ನು ಜಾಗೃತಗೊಳಿಸಿ, ರಾಷ್ಟ್ರೀಯತೆ ಬಿತ್ತಿದ ಮಂತ್ರವಾಗಿದೆ.

ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ವಂದೇ ಮಾತರಂ ಗೀತೆಗೂ ಈಗ 150ನೇ ವರ್ಷಾಚರಣೆ ನಡೆಯುತ್ತಿದೆ. ವಂದೇ ಮಾತರಂ ಗೀತೆ ರಾಷ್ಟ್ರವನ್ನು ಜಾಗೃತಗೊಳಿಸಿ, ರಾಷ್ಟ್ರೀಯತೆ ಬಿತ್ತಿದ ಮಂತ್ರವಾಗಿದೆ. ಅಲ್ಲದೆ ಜನಗಣಮನಕ್ಕೆ ಸರಿ ಸಮನಾಗಿ ವಂದೇ ಮಾತರಂ ಇತ್ತು. ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕಿತ್ತು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ನಿಮಿತ್ತ ತಾಲೂಕಿನ ಪೋಲಿಸ್ ಮೈದಾನದಲ್ಲಿ ನಡೆದ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಸಂಸದ ಕಾಗೇರಿ ಮಾತನಾಡಿದರು.

ದೇಶ ವಿಭಜನೆ ಆದಾಗ ಬ್ರಿಟಿಷರ ವಿರುದ್ಧ ಹೋರಾಟ ಆದಾಗ ಮೊಳಗಿದ ಕಹಳೆ ವಂದೇ ಮಾತರಂ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಘೋಷಣೆ ವಂದೇ ಮಾತರಂ ಆಗಿದೆ. ಇನ್ನು ದೇಶದ ಏಕೀಕರಣದ ವಿಚಾರದಲ್ಲಿ ವಲ್ಲಭ ಭಾಯಿ ಪಟೇಲರ ಕೊಡುಗೆ ದೊಡ್ಡದಿದೆ. ಪಟೇಲರಿಗೆ ಸರದಾರ ಎನ್ನುವ ಬಿರುದು ಬಾರ್ಡೋಲಿ ಹೋರಾಟದಿಂದ ಬಂತು. ನಮ್ಮ ಜಿಲ್ಲೆಯಲ್ಲೂ ಪಟೆಲರ ಕೊಡುಗೆ ಇತ್ತು. ದೇಶದ ಆರ್ಥಿಕ ನೀತಿಯ ಬಗ್ಗೆ ಅವರು ಒಂದು ಕಲ್ಪನೆ ನೀಡಿದ್ದರು. ಕಾಶ್ಮೀರವನ್ನು ಭಾರತಕ್ಕೆ ಸೇರಿಸಿದ ಖ್ಯಾತಿ ಪಟೇಲರಿಗೆ ಸಲ್ಲುತ್ತದೆ. ರಾಜರ ಪರಂಪರೆಯನ್ನು ಕೊನೆಗೊಳಿಸಿ ಸಂವಿಧಾನದ ಅಡಿಯಲ್ಲಿ ದೇಶವನ್ನು ಒಗ್ಗೂಡಿಸಿದ್ದು ಸರ್ದಾರ್ ಪಟೇಲರು. ಭಾರತ ಮಹಾನ್ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಮೂಲಕ ಜಗತ್ತಿನಲ್ಲಿ ಮಿಂಚಿದೆ. ಗುಲಾಮಿ ಸಂಸ್ಕೃತಿ ದೇಶದಲ್ಲಿ ಮಾಯವಾಗಿರಲಿಲ್ಲ. ಆದರೆ ಮೋದಿ ಪ್ರಧಾನಿ ಆದ ಬಳಿಕ ದೇಶ ಮೊದಲು ಎಂಬ ವಿಚಾರ ಜನರಲ್ಲಿ ಜಾಗೃತವಾಗಿದೆ. ಸ್ವದೇಶಿ ಆಚರಣೆ ಬೆಳೆಸೋಣ. ವಂದೇ ಭಾರತ್ ಶ್ರೇಷ್ಠ ಭಾರತ್ ಎಂಬುದನ್ನು ಜಗತ್ತಿಗೆ ಸಾರೋಣ ಎಂದು ನುಡಿದರು.

ಕುಮಟಾ -ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾತನಾಡಿದರು.

ವೇದಿಕೆ ಮೇಲೆ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಪಪಂ ಅಧ್ಯಕ್ಷ ವಿಜಯ್ ಕಾಮತ್, ಪಪಂ ಉಪಾಧ್ಯಕ್ಷ ಸುರೇಶ್ ಹೊನ್ನಾವರ, ತಹಸಿಲ್ದಾರ್ ಪ್ರವೀಣ್ ಕರಾಂಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಏಕತಾ ನಡಿಗೆಯಲ್ಲಿ ತಾಲೂಕಿನ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಸೇರಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಬ್ರಿಟಿಷ್ ಅಧಿಕಾರಿ ಸ್ವಾಗತಿಸಲು ರಚಿಸಿದ ಜನಗಣಮನ150ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ವಂದೇ ಮಾತರಂಗೆ ನಾವು ಇನ್ನಷ್ಟು ಪ್ರಾಮುಖ್ಯತೆಯನ್ನು ನೀಡಬೇಕು. ಜನಗಣಮನ ರಾಷ್ಟ್ರಗೀತೆಗೆ ಸರಿಸಮನಾಗಿ ವಂದೇ ಮಾತರಂ ಇದ್ದೆ ಇದೆ. ಇತಿಹಾಸವನ್ನು ಕೆದಕುವುದಕ್ಕೆ ನಾವು ಹೋಗುವುದಿಲ್ಲ. ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕಿತ್ತು ಅನ್ನುವ ಕೂಗು ಆಗಲೂ ಇತ್ತು. ಆದರೆ ಅವತ್ತಿನ ನಮ್ಮ ಪೂರ್ವಜರು ವಂದೇ ಮಾತರಂ ಇರಲಿ ಹಾಗೂ ಆ ಬ್ರಿಟಿಷ್ ಅಧಿಕಾರಿ ಸ್ವಾಗತಿಸಲು ರಚಿಸಿದ ಜನಗಣಮನವೂ ಇರಲಿ ಎಂದರು. ನಾವು ಅದನ್ನು ಒಪ್ಪಿಕೊಂಡು ಪಾಲಿಸುತ್ತಿದ್ದೇವೆ ಎಂದು ಕಾಗೇರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ