ಕ್ಷೇತ್ರದ ಸಮಸ್ಯೆಗಳ ಪರ ಧ್ವನಿ ಎತ್ತಿದ ಶಾಸಕ ನಾಡಗೌಡ

KannadaprabhaNewsNetwork |  
Published : Aug 23, 2026, 03:00 AM IST
ನಾಡಗೌಡ | Kannada Prabha

ಸಾರಾಂಶ

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ನೀರಾವರಿ, ಅಲ್ಪಸಂಖ್ಯಾತರ ಕಾಲೋನಿಗಳ ಮೂಲಸೌಕರ್ಯ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳನ್ನು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ನೀರಾವರಿ, ಅಲ್ಪಸಂಖ್ಯಾತರ ಕಾಲೋನಿಗಳ ಮೂಲಸೌಕರ್ಯ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಚಾರಗಳನ್ನು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಆ.19 ಮತ್ತು ಆ.21ರಂದು ನಡೆದ ವಿಧಾನಸಭಾ ಕಲಾಪಕ್ಕೆ ಸಂಬಂಧಿಸಿದಂತೆ ಅಪ್ಪಾಜಿ ನಾಡಗೌಡ ಅವರು ಕೇಳಿರುವ ಪ್ರಶ್ನೆಗಳಿಗೆ ಸರ್ಕಾರದ ವಿವಿಧ ಸಚಿವರು ಉತ್ತರ ನೀಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳು ಹೊರಬಿದ್ದಿವೆ.ಎಎಲ್.ಬಿಸಿ ಕಾಲುವೆ ಆಧುನೀಕರಣಕ್ಕೆ ಒತ್ತು:

ವಿಜಯಪುರ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-1 ಮತ್ತು ಹಂತ-2ರ ವ್ಯಾಪ್ತಿಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ರೈತರ ಜಮೀನುಗಳಿಗೆ ನೀರು ಒದಗಿಸುವ ಆಲಮಟ್ಟಿ ಎಡದಂಡೆ ಕಾಲುವೆ ಹಾಗೂ ವಿತರಣೆ ಕಾಲುವೆಗಳ ಸ್ಥಿತಿಗತಿಗಳ ಕುರಿತು ಉತ್ತರಿಸಿದ ಜಲಸಂಪನ್ಮೂಲ ಸಚಿವರು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1ರಡಿ ಆಲಮಟ್ಟಿ ಎಡದಂಡೆ ಕಾಲುವೆಯ 0.00 ಕಿ.ಮೀ.ನಿಂದ 68.24 ಕಿ.ಮೀ.ವರೆಗೆ ಬರುವ ವಿತರಣೆ ಕಾಲುವೆ ಸಂಖ್ಯೆ 1ರಿಂದ 29ರವರೆಗಿನ ಕಾಮಗಾರಿಗಳನ್ನು 2003-04ರಲ್ಲಿಯೇ ಪೂರ್ಣಗೊಳಿಸಲಾಗಿತ್ತು. ಇದರಡಿ ಸುಮಾರು 21,981 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಆದರೆ ಕಾಲುವೆ ಜಾಲ ನಿರ್ಮಾಣವಾಗಿ ಸುಮಾರು ಎರಡು ದಶಕಗಳು ಕಳೆದಿರುವುದರಿಂದ ಮುಖ್ಯ ಕಾಲುವೆ ಹಾಗೂ ವಿತರಣೆ ಕಾಲುವೆಗಳ ಹಲವು ಭಾಗಗಳು ಹಾಳಾಗಿವೆ. ಹೀಗಾಗಿ ಕಾಲುವೆಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

8.24 ಕಿ.ಮೀ. ಕಾಲುವೆ ಕಾಮಗಾರಿ ಶೇ.80 ಪೂರ್ಣ:

ಸರ್ಕಾರದ ಮಾಹಿತಿಯಂತೆ, 68.24 ಕಿ.ಮೀ. ಉದ್ದದ ಮುಖ್ಯ ಕಾಲುವೆಯ ಆಧುನೀಕರಣ ಕಾಮಗಾರಿ ಸುಮಾರು ಶೇ.80ರಷ್ಟು ಪೂರ್ಣಗೊಂಡಿದೆ. ಇದೇ ವ್ಯಾಪ್ತಿಯ ವಿತರಣೆ ಕಾಲುವೆ ಸಂಖ್ಯೆ 1ರಿಂದ 29ರವರೆಗಿನ ಕಾಮಗಾರಿಗಳು ಸುಮಾರು ಶೇ.65ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-2ರಡಿ 68.24ರಿಂದ 86.24 ಕಿ.ಮೀವರೆಗೆ ಬರುವ ವಿತರಣೆ ಕಾಲುವೆ ಸಂಖ್ಯೆ 30ರಿಂದ 54ರ ವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗಳು 2015-16ರಲ್ಲಿಯೇ ಪೂರ್ಣಗೊಂಡಿವೆ ಎಂದು ಸಚಿವರು ಉತ್ತರಿಸಿದ್ದಾರೆ.

ಕಾಲುವೆ ರೀಚ್‌ಗಳು ಹಾನಿಗೊಳಗಾದಲ್ಲಿ ವಾರ್ಷಿಕ ನಿರ್ವಹಣೆ ಅವಧಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಅನುದಾನ ಒದಗಿಸಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡು ಕಾಲುವೆಯ ಕೊನೆಯ ಅಂಚಿನವರೆಗೂ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆಧುನೀಕರಣ ಕಾಮಗಾರಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಎಸ್ಸಿಎಡಿಎ ವ್ಯವಸ್ಥೆ ಅಳವಡಿಸುವ ವಿಚಾರವನ್ನು ಅನುದಾನದ ಲಭ್ಯತೆ ಹಾಗೂ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ನಿಯಮಾನುಸಾರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.

ನೀರು, ಕಾಲೋನಿ ಅಭಿವೃದ್ಧಿ, ನಗರಾಭಿವೃದ್ಧಿ: ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ವಿಧಾನಸಭೆಯಲ್ಲಿ ಕೇಳಿರುವ ಈ ಪ್ರಶ್ನೆಗಳು ಮುದ್ದೇಬಿಹಾಳ ಕ್ಷೇತ್ರದ ಮೂರು ಪ್ರಮುಖ ಅಗತ್ಯಗಳನ್ನು ಪ್ರತಿಬಿಂಬಿಸುತ್ತವೆ. ಒಂದು ಕಡೆ ರೈತರ ಕೃಷಿ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸುವ ಎ.ಎಲ್.ಬಿ.ಸಿ. ಕಾಲುವೆ ಆಧುನೀಕರಣ, ಅಲ್ಪಸಂಖ್ಯಾತರ ಕಾಲೋನಿಗಳಿಗೆ ರಸ್ತೆ, ಚರಂಡಿ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ₹5 ಕೋಟಿ ಅನುದಾನ, ವೇಗವಾಗಿ ಬೆಳೆಯುತ್ತಿರುವ ಮುದ್ದೇಬಿಹಾಳ ಮತ್ತು ತಾಳಿಕೋಟೆ ಪಟ್ಟಣಗಳಿಗೆ ನಗರಸಭೆ ಸ್ಥಾನಮಾನ ಕಲ್ಪಿಸುವ ಪ್ರಯತ್ನ ಈ ಮೂರು ವಿಚಾರಗಳು ಕ್ಷೇತ್ರದ ಮುಂದಿನ ಅಭಿವೃದ್ಧಿಯಲ್ಲಿ ಮಹತ್ವ ಪಡೆದುಕೊಂಡಿವೆ.

ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ದಾಖಲಿಸಿ ಸರ್ಕಾರದಿಂದ ಅಧಿಕೃತ ಉತ್ತರ ಪಡೆಯುವ ಮೂಲಕ ಅಪ್ಪಾಜಿ ನಾಡಗೌಡ ಅವರು ಕ್ಷೇತ್ರದ ನೀರಾವರಿ, ನಗರಾಭಿವೃದ್ಧಿ ಹಾಗೂ ಮೂಲಸೌಕರ್ಯ ಸಮಸ್ಯೆಗಳನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿರುವುದು ಗಮನಾರ್ಹವಾಗಿದೆ. ಸರ್ಕಾರದ ಉತ್ತರಗಳಲ್ಲಿ ದೊರೆತಿರುವ ಭರವಸೆಗಳು ಮುಂದಿನ ದಿನಗಳಲ್ಲಿ ನೈಜ ಕಾಮಗಾರಿಗಳಾಗಿ ಪರಿವರ್ತನೆಯಾಗಬೇಕಿದೆ ಎಂಬುದು ಕ್ಷೇತ್ರದ ಜನರ ನಿರೀಕ್ಷೆಯಾಗಿದೆ.

ಅಲ್ಪಸಂಖ್ಯಾತರ ಕಾಲೋನಿಗಳಿಗೆ ₹5 ಕೋಟಿ ಮಂಜೂರು: ಮುದ್ದೇಬಿಹಾಳ ಮತಕ್ಷೇತ್ರದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರದಿಂದ ಅಂದರೆ ₹5 ಕೋಟಿ ಮಂಜೂರು ಮಾಡಲಾಗಿದೆ. ಇದರಲ್ಲಿ ₹375 ಲಕ್ಷ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನವನ್ನು ಕಾಮಗಾರಿಗಳಿಗೆ ಬಳಸಲಾಗುವುದು.ಅನುದಾನದ ಲಭ್ಯತೆ ಹಾಗೂ ನಿಯಮಾನುಸಾರ ಮುದ್ದೇಬಿಹಾಳ ಕ್ಷೇತ್ರಕ್ಕೂ ಅನುದಾನ ಮಂಜೂರು ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ನಗರಸಭೆ ಸ್ಥಾನಮಾನ ಯಾವಾಗ?ಮುದ್ದೇಬಿಹಾಳ ಮತ್ತು ತಾಳಿಕೋಟೆ ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಇಲ್ಲ ಎಂದು ಸಚಿವರು ಉತ್ತರ ನೀಡಿದ್ದಾರೆ.

ಜನಗಣತಿ-2027ರ ಹಿನ್ನೆಲೆಯಲ್ಲಿ ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸುವುದು ಅಥವಾ ಅವುಗಳ ವ್ಯಾಪ್ತಿ ವಿಸ್ತರಿಸುವುದಕ್ಕೆ ಇದ್ದ ಕಾಲಾವಕಾಶ 2025ರ ಡಿಸೆಂಬರ್ 31ರಂದು ಮುಕ್ತಾಯಗೊಂಡಿದೆ. ಈಗಾಗಲೇ ಜನಗಣತಿ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಈ ಹಂತದಲ್ಲಿ ಇಂತಹ ಪ್ರಸ್ತಾವನೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಮುಂದಿನ ದಿನಗಳಲ್ಲಿ ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಲು ಅವಕಾಶ ಕಲ್ಪಿಸಿದ ನಂತರ, ವಿಜಯಪುರ ಜಿಲ್ಲಾಧಿಕಾರಿಗಳು ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ, ಪೌರಾಡಳಿತ ನಿರ್ದೇಶನಾಲಯದ ಶಿಫಾರಸಿನ ಆಧಾರದ ಮೇಲೆ ಸರ್ಕಾರ ನಿಯಮಾನುಸಾರ ಪರಿಶೀಲಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಬ್ಬದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ
ಪ್ರತಿಭಾವಂತ ಗಾಯಕರಿಗೆ ವೇದಿಕೆ ಕಲ್ಪಿಸಲು ರಾಜ್ಯಮಟ್ಟ ಕಾರ್ಯಕ್ರಮ