ಕನ್ನಡಪ್ರಭ ವಾರ್ತೆ ಜಮಖಂಡಿ ಈದ್‌ ಮಿಲಾದ್‌ ಹಾಗೂ ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸಾಮರಸ್ಯದಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಡಿಜೆ ಸೌಂಡ್‌ಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಡಿವೈಎಸ್ಪಿ ರೋಷನ್ ಜಮೀರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಈದ್‌ ಮಿಲಾದ್‌ ಹಾಗೂ ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸಾಮರಸ್ಯದಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಡಿಜೆ ಸೌಂಡ್‌ಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಡಿವೈಎಸ್ಪಿ ರೋಷನ್ ಜಮೀರ ತಿಳಿಸಿದರು.

ನಗರದ ಶಹರ ಪೊಲೀಸ್‌ ಠಾಣೆಯಲ್ಲಿ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಸಮುದಾಯಗಳ ಸಹಕಾರ ಅಗತ್ಯ. ಹಬ್ಬದ ದಿನ ಪೊಲೀಸ್‌ ಬಂದೋಬಸ್ತ್‌, ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಲಾಗುವುದು. ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಮನವಿ ಮಾಡಿದರು.

ಪ್ರವಾದಿ ಮೊಹಮ್ಮದ ಅವರ ಜೀವನ ಸಂದೇಶವು ಸಹೋದರತೆ, ಸಮಾನತೆ, ಮಹಿಳೆಯರಿಗೆ ಗೌರವ, ಮಾನವೀಯತೆ ಹಾಗೂ ನೆರೆಯವರ ಬಗ್ಗೆ ಕಾಳಜಿ ವಹಿಸುವುದಾಗಿದೆ. ಜಮಖಂಡಿ ಶರಣರ ನಾಡಾಗಿದ್ದು, ಇಲ್ಲಿ ಎಲ್ಲ ಧರ್ಮದ ಜನರು ಸಾಮರಸ್ಯ ದಿಂದ ಬದುಕುವ ಪರಂಪರೆ ಇದೆ ಎಂದು ಹೇಳಿದರು.

ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ, ಮೆರವಣಿಗೆಯಲ್ಲಿ ಸುಮಾರು 4 ರಿಂದ 6 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಮೆರವಣಿಗೆಯ ವೇಳೆ ಯುವಕರು ಅನಗತ್ಯವಾಗಿ ಮಧ್ಯೆ ಮಧ್ಯೆ ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ಮಕ್ಕಳು, ಮಹಿಳೆಯರು ಹಾಗೂ ಹಿರಿಯರ ಅನುಕೂಲಕ್ಕಾಗಿ ಮೆರವಣಿಗೆ ನಿರಂತರವಾಗಿ ಸಾಗುವಂತೆ ನೋಡಿಕೊಳ್ಳಬೇಕು. ಮೆರವಣಿಗೆ ಮುಗಿದ ಬಳಿಕ ಕೆಲ ಯುವಕರು ಧ್ವಜ ಕಟ್ಟಿಕೊಂಡು ಬೈಕ್‌ಗಳನ್ನು ವೇಗವಾಗಿ ಓಡಿಸುವುದು ಅಪಾಯಕಾರಿ. ಇಂತಹ ಬೈಕ್‌ ರ್‍ಯಾಲಿಗಳನ್ನು ಸಮಾಜದ ಮುಖಂಡರು ನಿಯಂತ್ರಿಸುವಂತೆ ಕೋರಿದರು.

ಅಂಜುಮನ್‌ ಕಮೀಟಿ ಅಧ್ಯಕ್ಷ ತೌಪಿಕ್‌ ಪಾರ್ಥನಳ್ಳಿ ಮಾತನಾಡಿ, ಜಮಖಂಡಿಯಲ್ಲಿ ಈದ್‌ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದ್ದು, ಪೊಲೀಸ ಇಲಾಖೆ ಹಾಗೂ ಎಲ್ಲ ಸಮಾಜಗಳ ಸಹಕಾರದಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಬಾರಿಯೂ ಶಾಂತಿ, ಸಹೋದರತೆ ಮತ್ತು ಸೌಹಾರ್ದತೆಯೊಂದಿಗೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಪ್ರದೀಪ ಮೆಟಗುಡ ರಾಜೇಸಾಬ ಮಸಳಿ, ವಕೀಲ ಎ.ಎಂ.ಝಂಡೆ, ವಿನೋದ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು. ನಗರ ಠಾಣೆಯ ಪಿಎಸ್‌ಐ ಅನಿಲ ಕುಂಬಾರ ಸ್ವಾಗತಿಸಿ, ವಂದಿಸಿದರು.