ಕನ್ನಡಪ್ರಭ ವಾರ್ತೆ ಬೆಳಗಾವಿ ಮಕ್ಕಳಲ್ಲಿ ಅಡಗಿರುವ ವಿಶಿಷ್ಟ ಕಲೆಯನ್ನು ಪ್ರೋತ್ಸಾಹಿಸಲು ಚಿಗುರು ಎಂಬ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂದು ಸಾಹಿತಿ ರವಿ ಕೋಟಾರಗಸ್ತಿ ಹೇಳಿದರು. ನಗರದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ಆಯೋಜಿಸಿದ ಮಕ್ಕಳಲ್ಲಿರುವ ಕಲಾಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಒಂದು ದಿನದ ಮಕ್ಕಳ ಹಬ್ಬ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಕ್ಕಳಲ್ಲಿ ಅಡಗಿರುವ ವಿಶಿಷ್ಟ ಕಲೆಯನ್ನು ಪ್ರೋತ್ಸಾಹಿಸಲು ಚಿಗುರು ಎಂಬ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂದು ಸಾಹಿತಿ ರವಿ ಕೋಟಾರಗಸ್ತಿ ಹೇಳಿದರು. ನಗರದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ಆಯೋಜಿಸಿದ ಮಕ್ಕಳಲ್ಲಿರುವ ಕಲಾಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಒಂದು ದಿನದ ಮಕ್ಕಳ ಹಬ್ಬ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನಗೈದ ಪ್ರತಿಭೆಗಳನ್ನು ಆಯ್ಕೆ ಮಾಡಿ, ಅವರ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡುವ ಕಾರ್ಯಕ್ರಮ ಇದಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುವುದರ ಜೊತೆಗೆ ಉತ್ತಮ ಪ್ರಜೆಗಳನ್ನಾಗಿಸಲು ಸಹಾಯಕಾರಿಯಾಗಿವೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಎಚ್.ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ಉತ್ತಮವಾದ ಶಿಕ್ಷಣ ಪಡೆಯಲು ಸಹಾಯವಾಗುತ್ತದೆ ಎಂದರು.ಬೆಳಗಾವಿಯ ಲೇಖಕಿಯರ ಸಂಘದ ಅಧ್ಯಕ್ಷೆ ರಾಜನಂದಾ ಗಾರ್ಗಿ ಮಾತನಾಡಿ, ನಮ್ಮ ಸಮಾಜದ ಚಿಗುರುಗಳಾದ ಮಕ್ಕಳ ಜೀವನವನ್ನು ಬೆಳೆಸುವುದೇ ಈ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿದೆ. ಮಕ್ಕಳಲ್ಲಿ ಕೇವಲ ಶಿಕ್ಷಣವನ್ನು ಕಲಿಸುವುದಷ್ಟೇ ಅಲ್ಲದೇ ಅವರಲ್ಲಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಳೆಸಬೇಕು. ಪ್ರತಿ ಮಕ್ಕಳಲ್ಲಿ ತಮ್ಮದೇ ಆದ ಸಾಮರ್ಥ್ಯ ಇರುತ್ತದೆ ಅದನ್ನು ಹೊರ ಹಾಕಲು ಈ ರೀತಿಯ ವೇದಿಕೆಗಳನ್ನು ರೂಪಿಸಿದ್ದು ತುಂಬ ಸಂತಸದ ವಿಷಯ ಎಂದರು.ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್‌ ಪರಮೇಶ್ವರ ಹೆಗಡೆ ಮಾತನಾಡಿ, ಚಿಗುರು ಎಂದರೇ ಒಂದು ದೊಡ್ಡ ಮರವಲ್ಲದೆ ಇರಬಹುದು. ಆದರೆ, ಅದು ಅದೇ ಮರದ ಪ್ರಾರಂಭದ ಒಂದು ಪ್ರಮುಖ ಅಂಶ. ಮಕ್ಕಳ ಪ್ರತಿಭೆ ಗುರುತಿಸಲು ಹಮ್ಮಿಕೊಂಡ ಚಿಗುರು ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಏರ್ಪಡಿಸಿರುವುದು ತಮಗೆ ಸಂತಸ ತಂದಿದೆ. ಉತ್ತಮ ಬೆಳೆಗೆ ಫಲವತ್ತಾದ ಭೂಮಿ ಬೇಕು ಹಾಗೇ ಅರಳುವ ಪ್ರತಿಭೆಗೆ ಚಿಗುರು ಎಂಬ ಕಾರ್ಯಕ್ರಮ ಉತ್ತಮ ವೇದಿಕೆಯಾಗಬೇಕು ಎಂದು ತಿಳಿಸಿದರು.ಅನಘಾ ಸುಂಟಕರ ಮತ್ತು ತಂಡದಿಂದ ವಾದ್ಯ ಸಂಗೀತ, ಆದಿತಿ ಎಂ.ಬೆಟಗೇರಿ ಅವರಿಂದ ವಚನ ಸಂಗೀತ, ವಿನಾಯಕ ಕಮ್ಮಾರ ಹಾಗೂ ಸಂಗಡಿಗರಿಂದ ಜನಪದ ಸಂಗೀತ, ರವಿ ನೃತ್ಯ ಕಲಾ ಮಂದಿರದ ಜೆ.ಎಸ್.ಸಿರಿ ಅವರಿಂದ ಸಮೂಹ ನೃತ್ಯ, ಬಿ.ಕೆ.ಮಾಡೆಲ್ ಪ್ರೌಢಶಾಲಾ ವಿದ್ಯಾರ್ಥಿ ಶುಕ್ಲಾಂಭರ ಪತ್ತಾರ ಅವರಿಂದ ಏಕಪಾತ್ರಾಭಿನಯ, ರಾಮಗೌಡ ಪಾಟೀಲ ಹಾಗೂ ತಂಡದಿಂದ ನಾಟಕ/ ಸಮೂಹ ನೃತ್ಯ ಕಾರ್ಯಕ್ರಮ ಜರುಗಿದವು.ಈ ಸಂದರ್ಭದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾದ ಭಿಮಪ್ಪ ಹುದ್ದಾರ, ಹಿರಿಯ ಕಲಾವಿದರಾದ ಪಂ.ರಾಜಪ್ರಭು ಧೋತ್ರೆ, ರವಿ ನೃತ್ಯ ಕಲಾ ಮಂದಿರದ ಗುರುಗಳಾದ ರವಿಂದ್ರ ಶರ್ಮಾ, ಸಂತ ಮೀರಾ ಆಂಗ್ಲ ಮಧ್ಯಮ ಶಾಲೆಯ ಪ್ರಾಂಶುಪಾಲರಾದ ಸುಜಾತಾ ದಫ್ತರದಾರ, ಪೋಷಕರು ಸೇರಿದಂತೆ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೋಟ್...ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಸಹಾಯವಾಗುವಂತಹ ಚಿಗುರು ಕಾರ್ಯಕ್ರಮ ಹಮ್ಮಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯ.-ರವಿ ಕೋಟಾರಗಸ್ತಿ, ಹಿರಿಯ ಸಾಹಿತಿ.ಮಕ್ಕಳಿಗೆ ಬೆಳೆಯುವ ಹಾಗೂ ವಿದ್ಯಾಭ್ಯಾಸ ಮಾಡುವ ಈ ಹಂತದಲ್ಲಿ ಸಾಹಿತ್ಯ ಮತ್ತು ಸಂಗೀತದ ಅವಶ್ಯಕತೆ ಬಹಳಷ್ಟು ಬೇಕು ಕಾರಣ ಸಂಗೀತದಿಂದ ಮಕ್ಕಳ ಮನಸ್ಸನ್ನು ಏಕಾಗ್ರತೆಯತ್ತ ತರುವ ಶಕ್ತಿ ಇದೆ. ಈ ಪುಟಾಣಿ ಜಗತ್ತು ಸುಂದರವಾದ ತೋಟದ ತರಹ ಕಾಣುತ್ತಿದೆ ಅದರಲ್ಲಿ ಅರಳುವ ಹೂಗಳು ನೀವು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕುವ ಮುಖ್ಯ ಉದ್ದೇಶ ಈ ಚಿಗರು ಕಾರ್ಯಕ್ರಮದ್ದಾಗಿದೆ.-ವಿದ್ಯಾವತಿ ಎಚ್.ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ.