ಅಪಘಾತ ವಿಮೆ, ಸಿಎಂ ಪರಿಹಾರ ಧನ ಸೇರಿ ಒಟ್ಟು 13 ಲಕ್ಷ ರೂ.ಗಳ ಪರಿಹಾರಕ್ಕೆ ಕ್ರಮ
ಇತ್ತೀಚೆಗೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಬಾಲಕನ ತೆರಳಿದ ನಗರ ಶಾಸಕ ನಾರಾ ಭರತ್ ರೆಡ್ಡಿ ಕುಟುಂಬಸ್ಥರಿಗೆ ಮಹಾನಗರ ಪಾಲಿಕೆಯಿಂದ ₹5 ಲಕ್ಷ ಚೆಕ್ ವಿತರಿಸಿದರು.
ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಮಹಾನಗರ ಪಾಲಿಕೆಯ ಕಸ ಸಂಗ್ರಹ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿತ್ತು. ಬಾಲಕನ ಕುಟುಂಬಕ್ಕೆ ಪಾಲಿಕೆಯಿಂದ ₹5 ಲಕ್ಷ ಚೆಕ್ ಕೊಡುತ್ತಿದ್ದೇವೆ. ಅದೇ ರೀತಿ ಸಿಎಂ ಪರಿಹಾರ ಧನ ಅಡಿ ₹ 3 ಲಕ್ಷ ನೀಡಲಾಗುವುದು, ಅಪಘಾತ ವಿಮೆಯ ಪರಿಹಾರ ₹5 ಲಕ್ಷ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಎಷ್ಟೇ ಪರಿಹಾರ ಕೊಟ್ಟರೂ ಹೋದ ಜೀವ ಬರುವುದಿಲ್ಲ, ಕುಟುಂಬಸ್ಥರಿಗೆ ಮಗುವಿನ ಸಾವಿನ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದರು.ಇದೇ ಸಂದರ್ಭ ಸ್ಥಳೀಯ ಮುಖಂಡ ಸತೀಶ್ ಎಂಬವರು ವೈಯಕ್ತಿಕವಾಗಿ ನೀಡಿದ ₹25 ಸಾವಿರ ಪರಿಹಾರವನ್ನು ಶಾಸಕ ನಾರಾ ಭರತ್ ರೆಡ್ಡಿ ನೀಡಿದರು.
ಅದ್ಧೂರಿ ಸಾಹಿತ್ಯ ಸಮ್ಮೇಳನ ಆಯೋಜನೆ:ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾರಾ ಭರತ್ ರೆಡ್ಡಿ; ಆಂಧ್ರದ ಗಡಿ ಭಾಗದಲ್ಲಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಕನ್ನಡದ ಹಬ್ಬ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಏರ್ಪಡಿಸುವ ಅವಕಾಶ ನಮ್ಮದಾಗಲಿ ಅಂತಾನೇ ನಾವೆಲ್ಲ ಜನಪ್ರತಿನಿಧಿಗಳು ಪ್ರಯತ್ನ ಪಟ್ಟಿದ್ದೇವೆ, ಅದೇ ರೀತಿ ಸಮ್ಮೇಳನವನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಏರ್ಪಡಿಸಲಾಗುವುದೆಂದರು.