ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಗ್ರಾಮೀಣ ಪ್ರದೇಶ ರಸ್ತೆಗಳ ಕಾಂಕ್ರೀಟೀಕರಣ ಅತ್ಯಂತ ಗುಣಮಟ್ಟತೆಯಿಂದ ಕೂಡಿರಬೇಕು. ಉತ್ತಮ ರಸ್ತೆ ನಿರ್ಮಿಸುವ ಮುಖಾಂತರ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಸೂಚನೆ ನೀಡಿದರು.
ತಾಲ್ಲೂಕಿನ ವಸ್ತಾರೆ ಹೋಬಳಿಯ ಹೆಡದಾಳು ಗ್ರಾಮದ ಮಾವಿನಗುಣಿ ರಸ್ತೆಗೆ ಎಂ.ಡಿ.ಆರ್. ಯೋಜನೆಯಡಿ 1.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಸಮರ್ಪಕ ರಸ್ತೆ ನಿರ್ಮಿಸುವ ಸಂಬಂಧ ಗ್ರಾಮಸ್ಥರ ಬೇಡಕೆಯಿದ್ದ ಹಿನ್ನೆಲೆಯಲ್ಲಿ 1.6 ಕಿ.ಮೀ.ಗೆ ಅನುದಾನ ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ವಹಿಸಲಾಗಿದ್ದು ಗ್ರಾಮಸ್ಥರ ಪ್ರತಿಯೊಂದು ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದು ಹಲವಾರು ಜನಪರ ಯೋಜನೆಗಳನ್ನು ರೂಪಿಸಿದೆ. ಮುಖ್ಯಮಂತ್ರಿಗಳು ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ರೈತರಿಗೆ ಒತ್ತು ನೀಡುತ್ತಿರುವ ಜೊತೆಗೆ ಗ್ರಾಮಗಳ ಇತರೆ ಸವಲತ್ತುಗಳನ್ನು ಒದಗಿಸುವ ಮೂಲಕ ಪ್ರಾಮಾಣಿಕ ಕೆಲಸ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ರಸ್ತೆ ಕಾಮಗಾರಿ ಸಂಬಂಧ ಹಂತ ಹಂತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡ ಬೇಕು. ಕಾಂಕ್ರೀಟೀಕರಣ ಪೂರ್ಣಗೊಳಿಸಲು ವೇಳೆಯಲ್ಲಿ ಗ್ರಾಮಸ್ಥರು ಆಗಾಗ ಕಾಮಗಾರಿಯನ್ನು ವೀಕ್ಷಿಸಬೇಕು ಎಂದು ಮನವಿ ಮಾಡಿದರು.
ಕೋಟೆಯೂರು ಗ್ರಾಮಸ್ಥ ಎಂ.ಎಸ್.ಸಚಿನ್ ಮಾತನಾಡಿ, ಹಲವಾರು ಸಮಯದಿಂದ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ವೃದ್ದರಿಗೆ ಈ ರಸ್ತೆಯಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿತ್ತು.
ಇದೀಗ ಸರ್ಕಾರ ಗ್ರಾಮಸ್ಥರ ನೆರವಿಗೆ ಧಾವಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಆಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್‌ಕುಮಾರ್, ಸದಸ್ಯರಾದ ಲೀಲಾವತಿ ಪುಟ್ಟರಾಜು, ಹೆಚ್.ಎನ್.ಲೋಕೇಶ್, ಗ್ರಾಮಸ್ಥರಾದ ಜಯರಾಮ್, ಎಂ.ಜೆ.ಸುರೇಶ್, ಸುಬ್ರಹ್ಮಣ್ಯ ಗೌಡ, ಶಂಕರ್, ಧರ್ಮೇಶ್, ಗುತ್ತಿಗೆದಾರ ವಿಶ್ವನಾಥ್ ಹಾಜರಿದ್ದರು.