ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಮಡಿಕೇರಿ-ಕುಟ್ಟ ಅಂತಾರಾಜ್ಯ ಹೆದ್ದಾರಿಯ, ಕೇರಳ ರಾಜ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗೆ ಕುಟ್ಟ ಪೊಲೀಸ್ ಠಾಣೆ ಬಳಿಯಿಂದ ಕೇರಳ ತೋಲ್ಪಟ್ಟಿವರೆಗೆ 3.40 ಕೋಟಿ ರು. ಹಾಗೂ ಮಳೆಯಿಂದ ಹಾನಿಯಾಗಿರುವ ಮಂಚಳ್ಳಿ ಸಮೀಪದ ಕುಟ್ಟ- ಶ್ರೀಮಂಗಲ ಹೆದ್ದಾರಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ 1.40 ಕೋಟಿ ರು. ಸೇರಿ ಒಟ್ಟು 4.80 ಕೋಟಿ ರು.ಯ ಎರಡು ಕಾಮಗಾರಿ ಪ್ರಾರಂಭಿಸಲು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೂಮಿ ಪೂಜೆ ಪೂಜೆ ನೆರವೇರಿಸಿದರು.ಕರ್ನಾಟಕ-ಕೇರಳ ಗಡಿ ಭಾಗದ ಈ ರಸ್ತೆಯು, ವಾಣಿಜ್ಯ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದ್ದು, ಈ ಹಿಂದೆ ಸುರಿದ ಭಾರಿ ಮಳೆಗೆ ಹಾನಿಗೊಂಡಿತ್ತು.
ದಿನಕ್ಕೆ ಸಾವಿರಾರು ಜನರು ಪ್ರಯಾಣಿಸುವ ಈ ರಸ್ತೆಯ ದುರಸ್ತಿ ಕಾಮಗಾರಿಗೆ ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ವಿಶೇಷ ಅನುದಾನ ಒದಗಿಸಿದ್ದಾರೆ. ಭೂಮಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಶಾಸಕರು ಅತ್ಯಂತ ಶೀಘ್ರದಲ್ಲಿ ಈ ರಸ್ತೆಯು ಕಾಮಗಾರಿ ಮುಕ್ತಾಯಗೊಂಡು ಜನರಿಗೆ ಅನುಕೂಲವಾಗಲಿ ಎಂದು ಹಾರೈಸಿದರು.ಮಂಚಳ್ಳಿ ಬಳಿ ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆ:
ಕುಟ್ಟ-ಶ್ರೀಮಂಗಲ ಹೆದ್ದಾರಿಯ ಮಂಚಳ್ಳಿ ಬಳಿ ಮಳೆಗೆ ಭೂಕುಸಿತ ವಾಗಿರುವ ರಸ್ತೆಗೆ ಶಾಸಕರ ವಿಶೇಷ 1.40 ಕೋಟಿ ರು. ಅನುದಾನದಲ್ಲಿ ನಡೆಯುವ ಕಾಮಗಾರಿಗೆ ಶಾಸಕ ಪೊನ್ನಣ್ಣ ಭೂಮಿ ಪೂಜೆ ಸಲ್ಲಿಸಿದರು.ರಸ್ತೆಯ ಎರಡು ಬದಿಯಲ್ಲಿ ಗೇಬಿಯನ್ ತಡೆಗೋಡೆ ನಿರ್ಮಾಣ ಹಾಗೂ ಎಂಬಾಕ್ ಮೆಂಟ್ ಈ ಕಾಮಗಾರಿಯಲ್ಲಿ ನಡೆಯಲಿದೆ ಎಂದು ಶಾಸಕ ಪೊನ್ನಣ್ಣ ತಿಳಿಸಿದರು.
ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮೀದೇರಿರ ನವೀನ್, ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣ, ಶ್ರೀಮಂಗಲ ಪಾಕ್ಸ್ ಉಪಾಧ್ಯಕ್ಷ ಪಲ್ವಿನ್ ಪೂಣಚ್ಚ, ಮುಕ್ಕಾಟಿರ ನವೀನ್ ಅಯ್ಯಪ್ಪ, ಕಾಳಿಮಾಡ ಪ್ರಶಾಂತ್, ಮುಕ್ಕಾಟೀರ ಸಂದೀಪ್, ಚೊಟ್ಟೆಯಾಂಡ ಮಾಡ ಉದಯ, ರಾಜಶೇಖರ್, ಕೋಟ್ರಂಗಡ ಹರೀಶ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕ ಪ್ರಮುಖರು ಉಪಸ್ಥಿತರಿದ್ದರು.