ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕೃಷಿ ನಂಬಿಕೊಂಡು ಜೀವನ ಸಾಗಿಸವವರಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಗೆ ಉತ್ತೇಜನ ನೀಡುವಂತಾಗಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.ಕೊಡಗು ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಆಶ್ರಯದಲ್ಲಿ ನಗರದ ಕೃಷಿ ಭವನ ಕಚೇರಿಯ ಆವರಣದಲ್ಲಿ ನಡೆದ, 2024-25ನೇ ಸಾಲಿನ ವಿವಿಧ ಕೃಷಿ ಯೋಜನೆಗಳಡಿ ಸಹಾಯಧನ, ಸವಲತ್ತು ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರೈತಾಪಿ ವರ್ಗ ಪ್ರಸ್ತುತ ವರ್ಷಗಳಲ್ಲಿ ಸಂಕಷ್ಟ ಎದುರಿಸುತ್ತಿದೆ. ಅತಿವೃಷ್ಟಿ, ಅಕಾಲಿಕ ಮಳೆ, ಮತ್ತು ವಾತಾವರಣ ವೈಪರೀತ್ಯದಿಂದಾಗಿ ಬೆಳೆಗಳು ನೆಲ ಕಚ್ಚಿವೆ. ರೈತಾಪಿ ವರ್ಗದ ಜೀವನ ಸುಧಾರಿಸಬೇಕು ಎಂದರು.
ಇಲಾಖೆ ವತಿಯಿಂದ ರೈತರಿಗೆ ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣ ಪಡೆಯಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಕೃಷಿ ಚಟುವಟಿಕೆಗಳು ಸುಗಮವಾಗುತ್ತವೆ. ಕೂಲಿ ಕಾರ್ಮಿಕರ ಅಭಾವ ನೀಗಿಸುವಲ್ಲಿ ಸಹಕಾರವಾಗುತ್ತದೆ ಎಂದರು.ವಿರಾಜಪೇಟೆ, ಅಮ್ಮತ್ತಿ ಪೊನ್ನಂಪೇಟೆ, ಹುದಿಕೇರಿ, ಬಾಳಲೆ,ಶ್ರೀಮಂಗಲ ಹೋಬಳಿಗಳ ಫಲಾನುಭವಿಗಳ ಪೈಕಿ ಗುರುವಾರ ನಾಲ್ಕು ಮಂದಿಗೆ ಟಿಲ್ಲರ್, 10 ಮಂದಿಗೆ 5 ಎಚ್.ಪಿ ಡೀಸೆಲ್ ಇಂಜಿನ್, 3 ಮಂದಿಗೆ ಕಳೆ ಕೊಚ್ಚುವ ಯಂತ್ರ, 2 ಮಂದಿಗೆ ಎಚ್.ಟಿ.ಪಿ. ಸಿಂಪರಣಾ ಯಂತ್ರ ಮತ್ತು 15 ಮಂದಿಗೆ ಎಚ್.ಡಿ.ಪಿ.ಇ. ಪೈಪ್ ಹಸ್ತಾಂತರಿಸಲಾಯಿತು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್, ಉಪ ಕೃಷಿ ನಿರ್ದೇಶಕ ಡಾ.ಡಿ.ಎಸ್.ಸೋಮಶೇಖರ್, ವಿರಾಜಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಗೌರಿ ಆರ್., ವಿರಾಜಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಲವಿನ್ ಮಾದಪ್ಪ, ರೈತ ಸಂಪರ್ಕ ಕೇಂದ್ರ ಬಾಳಲೆ ಕೃಷಿ ಅಧಿಕಾರಿಗಳಾದ ಮೀರಾ ಎ.ಪಿ. ಮತ್ತು ಆಶ್ವಿನ್ ಕುಮಾರ್ ಎಚ್.ಬಿ. ಮತ್ತಿತರರಿದ್ದರು.