ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆ ಸೇರಿ ಜನರಿಗೆ ಅನುಕೂಲವಾಗುವ ಯಾವುದೇ ಅಭಿವೃದ್ದಿ ಯೋಜನೆಗಳಿಗೂ ನಾನು ವಿರೋಧಿಯಲ್ಲ. ನಾನು ಯಾವ ಉದ್ದಿಮೆದಾರರ ಪರವೂ ಇಲ್ಲ. ಕ್ಷೇತ್ರದ ಎಲ್ಲ ಭಾಗದ ಜನರಿಗೆ ವರಾಹಿ ನೀರು ದೊರಕಬೇಕು ಎನ್ನುವ ನಿಲುವಿನಲ್ಲಿ ಬದ್ಧತೆ ಇದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದಾಗ ಹೊಸಂಗಡಿ, ಸಿದ್ದಾಪುರ, ಆಜ್ರಿ, ಉಳ್ಳೂರು-74, ಬಾಂಡ್ಯ ಮುಂತಾದ ಭಾಗಗಳಿಗೆ ವರಾಹಿ ನೀರು ನೀಡಲು ಯೋಜನೆ ರೂಪಿಸುವಂತೆ ನಾನೇ ಸಲಹೆ ನೀಡಿದ್ದೆ. ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಲ್ಲ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ವರಾಹಿ ನೀರಾವರಿ ಯೋಜನೆಯ ಲಾಭ ಕ್ಷೇತ್ರದ ಜನರಿಗೆ ಆಗಬೇಕು ಎನ್ನುವ ಒತ್ತಾಸೆ ಹೊಂದಿದ್ದರು.ಗುಂಡೂರು, ಸೌಕೂರು ಹಾಗೂ ಜಲಜೀವನ್ ಯೋಜನೆಯೂ ವರಾಹಿ ನೀರಿನ ಮೂಲದಿಂದಲೇ ಆಗಿರುವ ಯೋಜನೆಗಳು ಎನ್ನುವುದನ್ನು ನೆನಪಿಸಲು ಬಯಸುತ್ತೇನೆ. ಸಿದ್ದಾಪುರ ಏತ ನೀರಾವರಿ ಯೋಜನೆಯೂ ಆದಷ್ಟು ಶೀಘ್ರದಲ್ಲಿ ಮುಗಿಯಬೇಕು ಎನ್ನುವುದು ನನ್ನ ಅಭಿಪ್ರಾಯ. ಆದರೆ ಯೋಜನೆಯನ್ನು ಯಥಾ ರೀತಿಯಲ್ಲಿ ಅನುಷ್ಠಾನ ಮಾಡುವುದರಿಂದ ಭವಿಷ್ಯದಲ್ಲಿ ಒಂದಷ್ಟು ತಾಂತ್ರಿಕ ತೊಂದರೆಗಳು ಬರಬಹುದು ಎನ್ನುವ ಅಭಿಪ್ರಾಯಗಳಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ಮುಂದುವರಿಸುವ ಮೊದಲು ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡು ಮುಂದುವರಿಯಬೇಕು ಎಂದರು.ಡ್ಯಾಂ ಪಕ್ಕದಲ್ಲಿ ಏತ ನೀರಾವರಿ ಪಂಪ್ ಸೆಟ್ ನಿರ್ಮಾಣ ಮಾಡುವುದರಿಂದ ಸಮತಟ್ಟಾಗಿ ಹರಿಯುವ ಕಾಲುವೆ ನೀರು ಹಿಂದಕ್ಕೆ ಸರಿಯುವ ಅಪಾಯವಿದೆ ಹಾಗೂ ಸಂಗ್ರಹ ತೊಟ್ಟಿಯಲ್ಲಿ ಹೂಳು ತುಂಬಿರುವುದರಿಂದ ಇಲ್ಲಿ ನೀರಿನ ಧಾರಣ ಸಾಮರ್ಥ್ಯವೂ ಕಡಿಮೆಯಾಗಿದೆ. ಪ್ರಸ್ತುತ ಆಲೋಚನೆ ಮಾಡಿರುವ ಜಾಗದಲ್ಲಿಯೇ ಕಾಮಗಾರಿ ಮುಂದುವರಿದಲ್ಲಿ ಪರಿಸರದ ಹಲವು ಗ್ರಾಮಗಳಿಗೆ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಭಾಗದ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗೆ ತೊಡಕಾಗುವ ಸಾಧ್ಯತೆಗಳು ಇದೆ ಎನ್ನುವುದನ್ನು 2023 ರಲ್ಲೇ ಮುಖ್ಯಮಂತ್ರಿಗಳ ಹಾಗೂ ಪ್ರಮುಖರ ಗಮನಕ್ಕೆ ತಂದಿದ್ದೇನೆ.ಈಗಾಗಲೇ ಪ್ರಾರಂಭಿಸಿರುವ ಯೋಜನೆಯನ್ನು ಯೋಜನಾ ಸ್ಥಳದಿಂದ ಕನಿಷ್ಠ 500-600 ಮೀಟರ್ ಕೆಳಭಾಗದಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಆಗ್ರಹ. ಈ ಯೋಜನೆ ಟರ್ನ್ ಕೀ ಮಾದರಿಯಲ್ಲಿ ನಡೆಯುತ್ತಿದೆ ಎನ್ನುವ ಮಾಹಿತಿ ಇದ್ದು, ಕಾಮಗಾರಿಯ ಸ್ಥಳ ಬದಲಾವಣೆ ಮಾಡಲು ಹೊಸದಾಗಿ ಡಿಪಿಆರ್, ಟೆಂಡರ್ ಪ್ರಕ್ರಿಯೆ ಬೇಕಾಗುವುದಿಲ್ಲ ಎನ್ನುವ ಅಭಿಪ್ರಾಯಗಳು ಇವೆ. ತ್ವರಿತವಾಗಿ ಕಾಮಗಾರಿ ಪೂರೈಸಲು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಅಗತ್ಯ ಬಿದ್ದಲ್ಲಿ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.ಜಿ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ.ವಿ ಪುತ್ರನ್, ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್ ಕುಮಾರ್ ಶೆಟ್ಟಿ ಸಿದ್ದಾಪುರ ಇದ್ದರು.ವರಾಹಿ ಯೋಜನೆಗಾಗಿ ಈ ಭಾಗದ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದು ಅವರ ಜಮೀನಿಗೆ ಮೊದಲು ನೀರುಣಿಸುವ ಕೆಲಸಗಳು ನಡೆಯಬೇಕು. ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆಯುವವರ ವಿರುದ್ದ ಕಾನೂನು ಕ್ರಮಕೈಗೊಳ್ಳುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.-ಕೆ. ಗೋಪಾಲ ಪೂಜಾರಿ, ಮಾಜಿ ಶಾಸಕರು ಬೈಂದೂರು
ವಿರೋಧಿಸುವವರು ಅಂದು ನಮ್ಮ ಪಕ್ಷದಲ್ಲೇ ಇದ್ದರು
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚುನಾವಣೆಯ ಗೆಲುವು ಸೋಲನ್ನು ಸಮಾನವಾಗಿ ಸ್ವೀಕರಿಸಿರುವ ನಾನು ರಾಜಕೀಯವಾಗಿ ನನ್ನನ್ನು ಬೆಳೆಸಿದ ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಋಣವನ್ನು ಇರಿಸಿಕೊಂಡಿದ್ದೇನೆ. 2023 ರಲ್ಲಿ ಇದೇ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾಗ ಆಗ ಅದು ವಿವಾದವಾಗಿರಲಿಲ್ಲ. ಯಾಕೆಂದರೆ ಈಗ ಅದನ್ನು ವಿರೋಧಿಸುವವರು ಅಂದು ನಮ್ಮ ಪಕ್ಷದಲ್ಲೇ ಇದ್ದರು ಎಂದು ಹೇಳಿದ ಅವರು, ಯೋಜನೆ ಪ್ರಾರಂಭವಾಗಿ ಹೊಳೆಶಂಕರನಾರಾಯಣ ನದಿಯ ಲಿಂಗಕ್ಕೆ ನೀರಿನ ತೊಂದರೆಯಾದರೆ ಅದು ಕಾಂಗ್ರೆಸ್ ನಿಂದ ಆದದ್ದು ಎಂದು ಹುಯಿಲೆಬ್ಬಿಸುವವರು ಇವರೇ ಎಂದರು.